ಮುಂಬೈ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ವಿದೇಶೀ ಕ್ರಿಕೆಟ್ ಲೀಗ್ ಬಿಗ್ ಬಾಶ್ ನಲ್ಲಿ ಆಡಲಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು. ಇದೀಗ ಅವರ ಕಡೆಯಿಂದ ಮತ್ತೊಂದು ಸುದ್ದಿ ಬಂದಿದೆ.
ಯುವಿ ಕಳೆದ ವರ್ಷವಷ್ಟೇ ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು. ಆದರೆ ಇದೀಗ ದೇಶೀಯ ಟಿ20 ಕ್ರಿಕೆಟ್ ನಲ್ಲಿ ಆಡಲು ಆಸಕ್ತಿ ವಹಿಸಿರುವ ಯುವಿ ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿಯುವ ಮನಸ್ಸು ಮಾಡಿದ್ದಾರೆ. ಇತ್ತೀಚೆಗಷ್ಟೇ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಯುವಿ ನಿವೃತ್ತಿಯಿಂದ ಹಿಂದೆ ಬಂದು ಪಂಜಾಬ್ ತಂಡದ ಪರ ಆಡಿದರೆ ಉತ್ತಮ ಎಂದು ಕೇಳಿಕೊಂಡಿತ್ತು. ಅದರ ಬೆನ್ನಲ್ಲೇ ಯುವಿ ಈಗ ಇಂತಹದ್ದೊಂದು ಚಿಂತನೆ ನಡೆಸುತ್ತಿದ್ದಾರೆ. ಚುಟುಕು ಮಾದರಿಯ ಕ್ರಿಕೆಟ್ ನ್ನು 45 ವರ್ಷದವರೆಗೂ ಆಡಬಹುದು ಎಂಬುದು ಯುವಿಯ ಲೆಕ್ಕಾಚಾರ. ಹೀಗಾಗಿ ಸದ್ಯದಲ್ಲೇ ಅವರು ಇಂತಹದ್ದೊಂದು ನಿರ್ಧಾರ ಪ್ರಕಟಿಸಿದರೂ ಅಚ್ಚರಿಯಿಲ್ಲ.