ಜಮೈಕಾ: ಸದ್ಯಕ್ಕೆ ಟೀಂ ಇಂಡಿಯಾದಲ್ಲಿ ವಯಸ್ಸಾದ ಆಟಗಾರರ ಪೈಕಿ ಎಂಎಸ್ ಧೋನಿ ಮತ್ತು ಯುವರಾಜ್ ಸಿಂಗ್ ಇದ್ದಾರೆ. ಇವರಲ್ಲಿ ಧೋನಿ ನಿವೃತ್ತಿ ಬಗ್ಗೆ ಆಗಾಗ ಮಾತು ಕೇಳಿಬರುತ್ತಿದೆ. ಈ ಬಗ್ಗೆ ಕೊಹ್ಲಿಯನ್ನು ಕೇಳಿದಾಗ ಅವರು ಇರಿಸುಮುರಿಸಾಗಿ ಉತ್ತರಿಸಿದ್ದು ಹೀಗೆ.
ಧೋನಿ ತಮ್ಮ ವೃತ್ತಿ ಜೀವನದ ಸಂಧ್ಯಾ ಕಾಲದಲ್ಲಿದ್ದಾರೆ. ಅವರು ಇತ್ತೀಚೆಗೆ ರನ್ ಗಳಿಸಿದರೂ, ಮೊದಲಿನಂತೆ ಬಾಲ್ ಎದುರಿಸುತ್ತಿಲ್ಲ ಎಂಬ ಆರೋಪಗಳಿಗೆ ಕೊಹ್ಲಿ ಉತ್ತರಿಸಿದ್ದಾರೆ. ನೆಟ್ ಪ್ರಾಕ್ಟೀಸ್ ಸಂದರ್ಭದಲ್ಲಿ ಧೋನಿ ತಡಬಡಾಯಿಸುತ್ತಿದ್ದ ಬಗ್ಗೆ ಪತ್ರಕರ್ತರು ಕೇಳಿದಾಗ ಕೊಹ್ಲಿ ಕೊಂಚ ವಿಚತಲಿತರಾದರು.
ನಂತರ ಸಾವರಿಸಿಕೊಂಡು ಉತ್ತರಿಸಿದ್ದಾರೆ. ‘ಧೋನಿ ಪರಿಸ್ಥಿತಿಯನ್ನು ಅರಿತುಕೊಂಡು ಆಡುವ ಆಟಗಾರ. ಅವರಿಗೆ ಏನನ್ನೂ ಹೇಳಬೇಕಿಲ್ಲ. ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತಾರೆ. ನೆಟ್ ಸೆಷನ್ ನಲ್ಲಿ ಹಾಗೆ ಆಡಿದ ಮಾತ್ರಕ್ಕೆ ಅವರನ್ನು ಕಡೆಗಣಿಸುವಂತಿಲ್ಲ. ನೀವು ಎಂತಹ ವಿಕೆಟ್ ನಲ್ಲಿ ಆಡುತ್ತೀರಿ ಎಂಬುದು ಮುಖ್ಯ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಅವರು ಶ್ರೀಲಂಕಾ ವಿರುದ್ಧ ಚೆನ್ನಾಗಿ ಆಡಿದ್ದಾರೆ. ಇದೇ ಸರಣಿಯಲ್ಲಿ ಒಮ್ಮೆ 70 ಇನ್ನೊಮ್ಮೆ 80 ರನ್ ಹೊಡೆದಿದ್ದಾರೆ. ಅವರು ಈಗಲೂ ಚೆನ್ನಾಗಿ ಬಾಲ್ ಸ್ಟ್ರೈಕ್ ಮಾಡುತ್ತಾರೆ. ಮೊನ್ನೆ ಒಂದು ಇನಿಂಗ್ಸ್ ನಲ್ಲಿ ಅವರು ವಿಫಲರಾಗಿರಬಹುದು. ಸ್ವಲ್ಪ ನಿಧಾನವಾಗಿ ಆಡಿರಬಹುದು. ಅದು ಎಲ್ಲಾ ಬ್ಯಾಟ್ಸ್ ಮನ್ ಗಳಿಗೂ ಒಮ್ಮೆ ಆಗಿಯೇ ಆಗುತ್ತದೆ.
ಹಾಗಂದ ಮಾತ್ರಕ್ಕೆ ಅವರು ವಿಫಲರಾಗುತ್ತಿದ್ದಾರೆ ಎಂದರ್ಥವಲ್ಲ. ನಾನು ಹಿಂದೆ ಸ್ಪಿನ್ನರ್ ಗಳನ್ನು ಚೆನ್ನಾಗಿ ಎದುರಿಸುತ್ತಿದ್ದೆ. ಆದರೆ ಇಲ್ಲಿನ ಪಿಚ್ ನಲ್ಲಿ ಸ್ವಲ್ಪ ಪರದಾಡುತ್ತಿದ್ದೇನೆ. ಅಂದ ಮಾತ್ರಕ್ಕೆ ನಾನು ಚೆನ್ನಾಗಿ ಆಡುತ್ತಿಲ್ಲ ಎಂದಲ್ಲ’ ಎಂದು ಮಾಜಿ ನಾಯಕನ ನೆರವಿಗೆ ಧಾವಿಸಿದ್ದಾರೆ ಹಾಲಿ ನಾಯಕ ಕೊಹ್ಲಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ