ಮುಂಬೈ: ಎಲ್ಲಾ ಸರಿ ಹೋಗಿದ್ದರೆ ರವಿಶಾಸ್ತ್ರಿ ಸ್ಥಾನದಲ್ಲಿ ಟೀಂ ಇಂಡಿಯಾ ಕೋಚ್ ಆಗಿ ವೀರೇಂದ್ರ ಸೆಹ್ವಾಗ್ ಇರಬೇಕಿತ್ತು. ಆದರೆ ಹಾಗಾಗಲಿಲ್ಲ. ಸೆಹ್ವಾಗ್ ಕೊನೆ ಕ್ಷಣದಲ್ಲಿ ಅವಕಾಶ ಕಳೆದುಕೊಂಡರು. ಅದರ ಬಗ್ಗೆ ಇಷ್ಟು ದಿನ ಮೌನವಾಗಿದ್ದ ಸೆಹ್ವಾಗ್ ಈಗ ಬಾಯ್ಬಿಟ್ಟಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ತಾವು ಕೋಚ್ ಆಗಿ ಆಯ್ಕೆಯಾಗದೇ ಇದ್ದಿದ್ದು ಯಾಕೆಂದು ವಿವರಿಸಿದ್ದಾರೆ. ನನಗೂ ಬಿಸಿಸಿಐಗೂ ‘ಸೆಟ್ಟಿಂಗ್’ ಸರಿ ಬರಲಿಲ್ಲ ಎಂದು ಸೆಹ್ವಾಗ್ ಸೂಚ್ಯವಾಗಿ ಹೇಳಿಕೊಂಡಿದ್ದಾರೆ.
ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವ ಇರಾದೆ ತನಗಿರಲಿಲ್ಲ. ಬಿಸಿಸಿಐಯ ಇಬ್ಬರು ಅಧಿಕಾರಿಗಳು ಬಂದು ಕೇಳಿಕೊಂಡಿದ್ದಕ್ಕೆ ಆ ಬಗ್ಗೆ ಮನಸ್ಸು ಮಾಡಿದೆ. ಅರ್ಜಿ ಹಾಕುವ ಮೊದಲು ರವಿಶಾಸ್ತ್ರಿಯವರಿಗೆ ಕೇಳಿದ್ದೆ. ನೀವು ಅರ್ಜಿ ಹಾಕಬಹುದಲ್ಲವೇ ಎಂದಿದ್ದೆ. ಅದಕ್ಕೆ ಅವರು ಮತ್ತೆ ನಾನು ಆ ತಪ್ಪು ಮಾಡಲ್ಲ ಎಂದಿದ್ದರು.
ಅತ್ತ ಕೊಹ್ಲಿಗೂ ಕೇಳಿದ್ದೆ. ಅವರೂ ಮುಂದುವರಿಯಿರಿ ಎಂದು ಸಲಹೆ ನೀಡಿದ್ದರು. ಇದಾದ ಬಳಿಕವೇ ಅರ್ಜಿ ಸಲ್ಲಿಸಿದ್ದೆ. ಹಾಗಿದ್ದರೂ ಕೊನೆ ಕ್ಷಣದಲ್ಲಿ ಅದೇನಾಯ್ತು ನನಗೆ ಗೊತ್ತಿಲ್ಲ. ನನಗೆ ಈ ಹುದ್ದೆಯ ಮೇಲೆ ಆಸಕ್ತಿಯೇ ಇರಲಿಲ್ಲ. ಕೇಳಿಕೊಂಡಿದ್ದಕ್ಕೆ ಅರ್ಜಿ ಹಾಕಿದ್ದೆ. ಇನ್ನೆಂದೂ ಅರ್ಜಿ ಹಾಕಲ್ಲ ಎಂದು ಕೋಚ್ ಆಯ್ಕೆ ವಿಚಾರದಲ್ಲಿ ನಡೆದ ರಾಜಕೀಯವನ್ನು ಬಿಚ್ಚಿಟ್ಟಿದ್ದಾರೆ.