ನವದೆಹಲಿ: ಕೊರೋನಾವೈರಸ್ ಹರಡುವಿಕೆ ತಡೆಯಲು ಮನೆಯಲ್ಲೇ ಇರಿ ಎಂದು ಎಷ್ಟೇ ಹೇಳಿದರೂ ಕೇಳದ ಜನತೆಗೆ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಬಾಲಕನೊಬ್ಬನ ವಿಡಿಯೋ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.
ಪುಟ್ಟ ಪೋರನೊಬ್ಬ ಕೊರೋನಾ ತಡೆಗೆ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ವಿವರವಾಗಿ ಹೇಳುವ ವಿಡಿಯೋ ಪ್ರಕಟಿಸಿದ ಸೆಹ್ವಾಗ್, ಇದು ಭಾರೀ ಮುಖ್ಯ ಸಂದೇಶ. ಈ ಹುಡುಗನ ಮಾತು ಕೇಳಿ. ಅವನು ಹೇಳುವುದನ್ನು ಪಾಲಿಸಿ ಎಂದು ಮನವಿ ಮಾಡಿದ್ದಾರೆ.
ಲಾಕ್ ಡೌನ್ ನಿಯಮ ಪಾಲಿಸದೇ ಬೇಕಾಬಿಟ್ಟಿ ತಿರುಗಾಡುತ್ತಿರುವ ಜನರಿಂದಾಗಿ ಈಗ 21 ದಿನ ಮುಗಿದರೂ ಲಾಕ್ ಡೌನ್ ಕೊನೆಗೊಳಿಸುವ ಧೈರ್ಯ ಸರ್ಕಾರಕ್ಕೆ ಇಲ್ಲವಾಗಿದೆ. ಇನ್ನೂ ಒಂದು ವಾರ ಲಾಕ್ ಡೌನ್ ಇದ್ದು, ಈಗಲಾದರೂ ಬುದ್ಧಿ ಕಲಿಯದಿದ್ದರೆ ಇನ್ನೂ ಒಂದು ತಿಂಗಳು ಮನೆಯೊಳಗೇ ಕಳೆಯಲು ಸಿದ್ಧರಾಗಬೇಕಾಗುತ್ತದೆ.