ಬಾರ್ಬಡೋಸ್: ಕೋಚ್ ಅನಿಲ್ ಕುಂಬ್ಳೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕುರಿತು ಕೊನೆಗೂ ನಾಯಕ ಕೊಹ್ಲಿ ಬಾಯ್ಬಿಟ್ಟಿದ್ದಾರೆ. ಇಷ್ಟು ದಿನ ಮೌನವಾಗಿದ್ದ ಕೊಹ್ಲಿ ತಮ್ಮ ಮೇಲಿನ ಅಪವಾದಗಳ ಕುರಿತು ಮೌನ ಮುರಿದಿದ್ದಾರೆ.
ವೆಸ್ಟ್ ಇಂಡೀಸ್ ಸರಣಿಗೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೊಹ್ಲಿ ‘ನಾವು ಅನಿಲ್ ಕುಂಬ್ಳೆ ನಿರ್ಧಾರವನ್ನು ಗೌರವಿಸುತ್ತೇವೆ’ ಎಂದಿದ್ದಾರೆ. ಹಾಗಾದರೆ ನಿಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯದಿಂದಾಗಿ ಕುಂಬ್ಳೆ ರಾಜೀನಾಮೆ ನೀಡಬೇಕಾಯಿತಂತಲ್ಲಾ ಎಂದು ಕೇಳಿದ್ದಕ್ಕೆ ರಕ್ಷಣಾತ್ಮಕವಾಗಿ ಆಡಿದ್ದಾರೆ.
‘ವೈಯಕ್ತಿಕವಾಗಿ ಕುಂಬ್ಳೆ ಪಾಜಿ ಬಗ್ಗೆ ನಮಗೆಲ್ಲಾ ಗೌರವವಿದೆ. ಒಬ್ಬ ಆಟಗಾರನಾಗಿ ಅವರ ಸಾಧನೆಗೆ ನಮಗೆ ಅಪಾರ ಗೌರವವಿದೆ. ಆದರೆ ಒಬ್ಬ ಕೋಚ್ ಆಗಿ ಅವರು ಹೇಗಿದ್ದರು ಎಂಬುದನ್ನು ನಾನು ಹೇಳಲು ಇಷ್ಟಪಡುವುದಿಲ್ಲ.
ಯಾಕೆಂದರೆ ನಮ್ಮ ಡ್ರೆಸ್ಸಿಂಗ್ ರೂಂ ನಲ್ಲಿ ನಡೆಯುವ ವೈಯಕ್ತಿಕ ವಿಚಾರಗಳನ್ನು ಗೌಪ್ಯವಾಗಿಡುವುದು ನನ್ನ ಕರ್ತವ್ಯ. ಅಲ್ಲಿ ನಡೆಯುವ ವಿಚಾರಗಳನ್ನು ಸಾರ್ವಜನಿಕವಾಗಿ ತೆರೆದಿಡುವುದು ನನಗೆ ಇಷ್ಟವಿಲ್ಲ. ಈ ವಿಚಾರಗಳನ್ನು ನಮ್ಮ ಯಾವುದೇ ಆಟಗಾರರು ಬಹಿರಂಗಪಡಿಸಲು ಇಷ್ಟಪಡುವುದಿಲ್ಲ’ ಎಂದಿದ್ದಾರೆ ಕೊಹ್ಲಿ.
ಅಲ್ಲಿಗೆ ತಮ್ಮ ನಡುವೆ ಭಿನ್ನಾಭಿಪ್ರಾಯವಿದ್ದದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಅದರ ವಿವರ ಬಹಿರಂಗಪಡಿಸಲು ನಿರಾಕರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ