ಮುಂಬೈ: ಟೀಂ ಇಂಡಿಯಾ ಆಟಗಾರರ ವೇತನ ಪರಿಷ್ಕರಣೆ ಮಾಡಿ ಇತ್ತೀಚಿಗೆ ಬಿಸಿಸಿಐ ಹೊಸ ಗುತ್ತಿಗೆ ಬಿಡುಗಡೆ ಮಾಡಿತ್ತು. ಆದರೆ ನಾಯಕ ವಿರಾಟ್ ಕೊಹ್ಲಿ ಇಷ್ಟು ಸಾಲದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದು, ಇನ್ನೂ ಹೆಚ್ಚು ವೇತನ ನೀಡಿ ಎಂದು ಬೇಡಿಕೆ ಇಟ್ಟಿದ್ದಾರೆ.
ಶ್ರೀಮಂತ ಕ್ರಿಕೆಟ್ ಮಂಡಳಿಯೆನಿಸಿಕೊಂಡಿರುವ ಬಿಸಿಸಿಐಗೆ ಸಾಕಷ್ಟು ಆದಾಯ ತಂದುಕೊಡುತ್ತಿರುವವರು ಕ್ರಿಕೆಟಿಗರು. ಆದರೂ ವೇತನದ ವಿಚಾರಕ್ಕೆ ಬಂದರೆ, ವಿಶ್ವದ ಇತರ ಕ್ರಿಕೆಟ್ ಮಂಡಳಿಗಿಂತ ಕಡಿಮೆ ವೇತನ ನೀಡಲಾಗುತ್ತಿದೆ. ಕನಿಷ್ಠ ವಾರ್ಷಿಕ 5 ಕೋಟಿ ರೂ. ಯಷ್ಟು ವೇತನ ಏರಿಕೆ ಮಾಡಿ ಎಂದು ಕೊಹ್ಲಿ ಬಿಸಿಸಿಐ ತಾಂತ್ರಿಕ ಸಮಿತಿ ಎದುರು ಮನವಿ ಮಾಡಿದ್ದಾರೆ.
ಈ ಬಗ್ಗೆ ನಾಳೆ ನಡೆಯಲಿರುವ ಬಿಸಿಸಿಐ ಸಭೆಯಲ್ಲಿ ಚರ್ಚೆಯಾಗಲಿದೆ ಎಂದು ಬಿಸಿಸಿಐ ಆಡಳಿತಾಧಿಕಾರಿ ವಿನೋದ್ ರಾಯ್ ಹೇಳಿದ್ದಾರೆ. ಇಂಗ್ಲೆಂಡ್, ಆಸ್ಟ್ರೇಲಿಯಾ, ದ. ಆಫ್ರಿಕಾ ಕ್ರಿಕೆಟಿಗರು ಭಾರತೀಯರಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಾರೆ ಎಂಬುದು ಕೊಹ್ಲಿ ವಾದ.
ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆದ್ದ ಬೆನ್ನಲ್ಲೇ ಕೊಹ್ಲಿ ತಮ್ಮ ತಂಡದ ಇತರ ಪ್ರಮುಖ ಆಟಗಾರರೊಂದಿಗೆ ಚರ್ಚಿಸಿ ಈ ಬೇಡಿಕೆಯಿಟ್ಟಿದ್ದಾರೆ ಎನ್ನಲಾಗಿದೆ. ಕೋಚ್ ಅನಿಲ್ ಕುಂಬ್ಳೆ ಮತ್ತು ಕೊಹ್ಲಿ ಟೆಸ್ಟ್ ಮತ್ತು ಏಕದಿನ ಪಂದ್ಯಗಳಿಗೆ ಗ್ರೇಡ್ ಎ ಆಟಗಾರರಿಗೆ ತಲಾ 5 ಕೋಟಿ ರೂ. ಸಂಭಾವನೆ ನೀಡಬೇಕೆಂದು ಒತ್ತಾಯ ಮಂಡಿಸಿದ್ದಾರೆ ಎನ್ನಲಾಗಿದೆ. ಇದನ್ನು ಪುರಸ್ಕರಿಸಿದಲ್ಲಿ ಸದ್ಯದಲ್ಲೇ ಕ್ರಿಕೆಟಿಗರ ಸಂಭಾವನೆ ಇನ್ನಷ್ಟು ಹೆಚ್ಚಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ