ಮೊಹಾಲಿ: ಆಸ್ಟ್ರೇಲಿಯಾ ವಿರುದ್ಧ ಒಂದೇ ಪಂದ್ಯಕ್ಕೆ ಟೀಂ ಇಂಡಿಯಾಗೆ ಧೋನಿ ಅನುಪಸ್ಥಿತಿ ಕಾಡತೊಡಗಿದೆ! ಕಾರಣ ರಿಷಬ್ ಪಂತ್ ಕೀಪಿಂಗ್ ವೈಖರಿ!
ನಾಲ್ಕನೇ ಏಕದಿನ ಪಂದ್ಯದಲ್ಲಿ ರಿಷಬ್ ಪಂತ್ ಸ್ಟಂಪಿಂಗ್ ಚಾನ್ಸ್ ಒಂದನ್ನು ಮಿಸ್ ಮಾಡಿದ್ದು, ನಾಯಕ ವಿರಾಟ್ ಕೊಹ್ಲಿಗೆ ಸಿಟ್ಟು ತರಿಸಿದೆ. ಸ್ವತಃ ಕೊಹ್ಲಿ ಸೋಲಿಗೆ ಇದೂ ಒಂದು ಕಾರಣ ಎಂದು ಪಂದ್ಯದ ನಂತರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಔಟ್, ನಾಟೌಟ್ ನ್ನು ಕರಾರುವಾಕ್ಕಾಗಿ ಹೇಳುವ ಧೋನಿ ಇಲ್ಲದೇ ಡಿಆರ್ ಎಸ್ ವ್ಯವಸ್ಥೆಯನ್ನೂ ಸರಿಯಾಗಿ ಅಳವಡಿಸಿಕೊಳ್ಳಲಾಗದೇ ಭಾರತ ಹೆಣಗಾಡಿದೆ.
ಆಸ್ಟ್ರೇಲಿಯಾ ಇನಿಂಗ್ಸ್ ನ 44 ನೇ ಓವರ್ ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಅಲೆಕ್ಸ್ ಕ್ಯಾರಿ ಬ್ಯಾಟ್ ಗೆ ತಗುಲಿದ ಬಾಲ್ ಕ್ರೀಸ್ ನ ಕೊಂಚವೇ ದೂರದಲ್ಲಿ ಬಿತ್ತು. ತಕ್ಷಣವೇ ರನೌಟ್ ಗೆ ಚಾನ್ಸ್ ಪಡೆಯಲು ಮುಂದಾದ ರಿಷಬ್ ಧೋನಿ ಸ್ಟೈಲ್ ನಲ್ಲಿ ಹಿಂದಕ್ಕೆ ತಿರುಗಿ ಸ್ಟಂಪ್ ನತ್ತ ಬಾಲ್ ಎಸೆಯಲು ಮುಂದಾದರು. ಆದರೆ ಅದು ಸ್ಟಂಪ್ ಮಿಸ್ ಆಯಿತು. ಇದರ ಲಾಭ ಪಡೆದ ಕ್ಯಾರಿ ಸಿಂಗಲ್ ರನ್ ಕದ್ದರು.
ಆದರೆ ಈ ಘಟನೆ ನಾಯಕ ಕೊಹ್ಲಿಗೆ ಸಿಟ್ಟು ತರಿಸಿತು. ಅವರು ಕೈ ಎತ್ತಿ ತಮ್ಮ ಅಸಮಾಧಾನ ಹೊರ ಹಾಕಿದರು. ಅಷ್ಟೇ ಅಲ್ಲ, ಮೈದಾನದಲ್ಲಿದ್ದ ಪ್ರೇಕ್ಷಕರು ಕೂಡಾ ‘ಧೋನಿ ಧೋನಿ’ ಎಂದು ಕೂಗಿ ರಿಷಬ್ ಮೇಲೆ ಆಕ್ರೋಶ ಹೊರಹಾಕಿದರು. ಈ ವಿಚಾರವನ್ನು ಕೊಹ್ಲಿ ಪ್ರಶಸ್ತಿ ಸಮಾರಂಭದಲ್ಲೂ ಪ್ರಸ್ತಾಪಿಸಿದ್ದರು. ಕೆಲವು ಮಿಸ್ ಫೀಲ್ಡ್ ಗಳೂ ನಮ್ಮ ಗೆಲುವಿನ ಅವಕಾಶ ಕಸಿದುಕೊಂಡಿತು ಎಂದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ