ಲಂಡನ್: ಪಾಕಿಸ್ತಾನ ವಿರುದ್ಧ ಗೆಲುವು ಸಾಧಿಸಿದ ನಂತರ ಟೀಂ ಇಂಡಿಯಾ ವಿರಾಟ್ ಕೊಹ್ಲಿ ಚ್ಯಾರಿಟಿ ಸಂಸ್ಥೆಯ ಕಾರ್ಯಕ್ರಮದ ಅಂಗವಾಗಿ ಪಾರ್ಟಿ ಆಯೋಜಿಸಲಾಗಿತ್ತು. ಅದಕ್ಕೆ ಬಹುಕೋಟಿ ಸಾಲ ಪ್ರಕರಣದ ಆರೋಪಿ ವಿಜಯ್ ಮಲ್ಯ ಕೂಡಾ ಬಂದಿದ್ದರು ಎನ್ನುವುದು ಹಳೇ ವಿಚಾರ!
ಇದು ಭಾರೀ ಸುದ್ದಿಯಾಗಿತ್ತು. ಆದರೆ ಪಾರ್ಟಿಗೆ ಬಂದಿದ್ದ ವಿಜಯ್ ಮಲ್ಯರನ್ನು ಬೇಕೆಂದೇ ಟೀಂ ಇಂಡಿಯಾ ಆಟಗಾರರು ಕಡೆಗಣಿಸಿದರಾ? ಹಾಗೊಂದು ಸುದ್ದಿ ಹರಿದಾಡುತ್ತಿದೆ.
ಮಲ್ಯರೊಂದಿಗಿನ ಭೇಟಿ ತಪ್ಪಿಸುವುದಕ್ಕಾಗಿಯೇ ವಿರಾಟ್ ಕೊಹ್ಲಿ ಸೇರಿದಂತೆ ಟೀಂ ಇಂಡಿಯಾ ಆಟಗಾರರು ಪಾರ್ಟಿಯಿಂದ ಬೇಗನೇ ನಿರ್ಗಮಿಸಿದರು ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಅದಾಗಲೇ ಪಂದ್ಯ ನಡೆಯುತ್ತಿದ್ದಾಗ ವಿಐಪಿ ಗ್ಯಾಲರಿಯಲ್ಲಿ ಕುಳಿತಿದ್ದ ಮಲ್ಯ ಫೋಟೋ ಸಾಕಷ್ಟು ವಿವಾದ ಉಂಟುಮಾಡಿದ ಹಿನ್ನಲೆಯಲ್ಲಿ ಮತ್ತೊಂದು ವಿವಾದವಾಗದಂತೆ ಟೀಂ ಇಂಡಿಯಾ ಆಟಗಾರರು ಅವರನ್ನು ಭೇಟಿಯಾಗಲೇ ಇಲ್ಲ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.