ಲಂಡನ್: ವಿಶ್ವಕಪ್ 2019 ರಲ್ಲಿ ಅದ್ಭುತ ಫಾರ್ಮ್ ಪ್ರದರ್ಶಿಸಿರುವ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಧೋನಿ ಜತೆಗೆ ದಾಖಲೆಯೊಂದರ ರೇಸ್ ಮುಂದುವರಿಸಿದ್ದಾರೆ.
ಏಕದಿನ ಪಂದ್ಯಗಳಲ್ಲಿ ಅತೀ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ ಆಟಗಾರ ಎಂಬ ದಾಖಲೆಯಲ್ಲಿ ಈ ಇಬ್ಬರೂ ಆಟಗಾರರು ಪೈಪೋಟಿ ನಡೆಸುತ್ತಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಧೋನಿ ದಾಖಲೆ ಸರಿಗಟ್ಟಿದ ಕೆಲವೇ ಕ್ಷಣಗಳಲ್ಲಿ ಧೋನಿ ಅದನ್ನು ಮುರಿದು ಮುನ್ನಡೆದಿದ್ದರು.
ಇದೀಗ ನಿನ್ನೆಯ ಪಂದ್ಯದಲ್ಲಿ ಮತ್ತೆ ರೋಹಿತ್ ಮುನ್ನಡೆ ಸಾಧಿಸಿದ್ದು, ಧೋನಿ ದಾಖಲೆಯನ್ನು ಮುರಿದು ಭಾರತದ ಪೈಕಿ ಏಕದಿನ ಪಂದ್ಯಗಳಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಧೋನಿ 228 ಸಿಕ್ಸರ್ ಸಿಡಿಸಿದ್ದರೆ ರೋಹಿತ್ ಸಿಕ್ಸರ್ ಗಳ ಸಂಖ್ಯೆ ಇದೀಗ 230 ಕ್ಕೇರಿದೆ.
ಈ ಪಂದ್ಯದಲ್ಲಿ ಶತಕ (104) ಸಿಡಿಸಿದ ರೋಹಿತ್ ಶರ್ಮಾ ಒಟ್ಟಾರೆ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ 5 ನೇ ಶತಕ ಸಿಡಿಸುವ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಅತೀ ಹೆಚ್ಚು ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದರು. ರೋಹಿತ್ ಈಗ ಕುಮಾರ್ ಸಂಗಕ್ಕಾರ ಮತ್ತು ರಿಕಿ ಪಾಂಟಿಂಗ್ ಜತೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. 6 ಶತಕ ಸಿಡಿಸಿರುವ ಸಚಿನ್ ತೆಂಡುಲ್ಕರ್ ಮೊದಲ ಸ್ಥಾನದಲ್ಲಿದ್ದಾರೆ. ಅಷ್ಟೇ ಅಲ್ಲದೆ, ವಿಶ್ವಕಪ್ ಪಂದ್ಯಗಳಲ್ಲಿ ಭಾರತದ ಪರ ಗರಿಷ್ಠ ಆರಂಭಿಕ ಜತೆಯಾಟ (176) ಆಡಿದ ದಾಖಲೆಯನ್ನೂ ಕೆಎಲ್ ರಾಹುಲ್ ಜತೆಗೂಡಿ ಮಾಡಿದ್ದಾರೆ.