ಚೆನ್ನೈ: ಧೋನಿ ಮತ್ತು ತಮ್ಮ ನಡುವೆ ಎಲ್ಲವೂ ಸರಿಯಿಲ್ಲ ಎಂಬ ವದಂತಿಗಳಿಗೆ ಸ್ವತಃ ರವಿಚಂದ್ರನ್ ಅಶ್ವಿನ್ ತೆರೆ ಎಳೆದಿದ್ದಾರೆ. ಅವರು ನಡೆದ ಹಾದಿಯನ್ನು ಸರಿಗಟ್ಟುವುದು ಕಷ್ಟದ ಕೆಲಸ ಎಂದು ಧೋನಿಯನ್ನು ಕೊಂಡಾಡಿದ್ದಾರೆ.
“ಎಂಎಸ್ ಧೋನಿ ನಾಯಕತ್ವದಿಂದ ಕಲಿಯುವಂತಹದ್ದು ಸಾಕಷ್ಟಿದೆ. ಇದು ಅವರ ವೈಯಕ್ತಿಕ ನಿರ್ಧಾರ. ಅದರ ಬಗ್ಗೆ ನಾನೇನೂ ಕಾಮೆಂಟ್ ಮಾಡಲಾಗದು. ಆದರೆ ಅವರು ಮಾಡಿದ ಸಾಧನೆಯನ್ನು ಮಾಡುವುದು ಅಷ್ಟು ಸುಲಭವಲ್ಲ” ಎಂದು ಧೋನಿ ನಾಯಕತ್ವದ ಬಗ್ಗೆ ಅಭಿಪ್ರಾಯಪಟ್ಟಿದ್ದಾರೆ.
ಆದರೆ ಧೋನಿಯಂತಹ ನಾಯಕನನ್ನು ಭಾರತ ಇನ್ನು ಕಾಣಲು ಸಾಧ್ಯವಿಲ್ಲವೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅಶ್ವಿನ್ “ಹಾಗೆ ಹೇಳಲು ಸಾಧ್ಯವಾಗದು. ಕೊಹ್ಲಿ ಯಾವ ಲೆಕ್ಕದಲ್ಲೂ ಕಮ್ಮಿಯಲ್ಲ. ಹಿಂದೆ ಸೌರವ್ ಗಂಗೂಲಿಯನ್ನು ಹಾಗೇ ಹೇಳಲಾಗುತ್ತಿತ್ತು. ಆದರೆ ಗಂಗೂಲಿ ನಂತರ ಧೋನಿ ಬಂದು ಹಲವು ಸಾಧನೆಗಳನ್ನು ಮಾಡಿದರು. ಹಾಗೇ ಕೊಹ್ಲಿಯೂ ಮಾಡಬಹುದು” ಎಂದಿದ್ದಾರೆ.
ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿ ಲಭಿಸಿದಾಗ ತಮ್ಮ ವೃತ್ತಿ ಜೀವನದಲ್ಲಿ ಪ್ರೋತ್ಸಾಹಿಸಿದ ಎಲ್ಲರ ಹೆಸರನ್ನು ಉಲ್ಲೇಖಿಸಿದರೂ, ಅಶ್ವಿನ್ ಧೋನಿ ಹೆಸರು ಹೇಳದೇ ಇದ್ದುದ್ದು, ಇವರಿಬ್ಬರ ನಡುವೆ ಸಂಬಂಧ ಹಳಸಿದೆ ಎಂಬ ವದಂತಿಗಳು ಬಂದಿತ್ತು. ಆದರೆ ಇದೀಗ ಧೋನಿ ಬಗ್ಗೆ ಹೊಗಳಿ ಅಶ್ವಿನ್ ತಮ್ಮ ಮೊದಲ ನಾಯಕನಿಗೆ ಗೌರವ ಸಲ್ಲಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ