ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಮೂರನೇ ಟೆಸ್ಟ್ ಪಂದ್ಯದ ವೇಳೆ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ರನ್ನು ಕೆಲವು ಆಸ್ಟ್ರೇಲಿಯಾದ ಅಭಿಮಾನಿಗಳು ಜನಾಂಗೀಯವಾಗಿ ನಿಂದಿಸಿದ್ದಾರೆಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಮೂಲದ ಆಸ್ಟ್ರೇಲಿಯನ್ ಅಭಿಮಾನಿಯೊಬ್ಬರ ಹೇಳಿಕೆ ಈಗ ಮಹತ್ವ ಪಡೆದಿದೆ.
ಪ್ರತೀಕ್ ಕೇಳ್ಕರ್ ಎಂಬ ಅಭಿಮಾನಿ ಸೇರಿದಂತೆ ಆರು ಮಂದಿಯನ್ನು ಸಿರಾಜ್ ನೀಡಿದ ದೂರಿನ ಮೇರೆಗೆ ಪೊಲೀಸರು ಮೈದಾನದಿಂದ ಹೊರಹಾಕಿದ್ದರು. ಇದೀಗ ಘಟನೆ ಬಗ್ಗೆ ಬಹಿರಂಗ ಹೇಳಿಕೆ ನೀಡಿರುವ ಪ್ರತೀಕ್ ಅಲ್ಲಿದ್ದವರು ವೆಲ್ ಕಮ್ ಟು ಸಿಡ್ನಿ ಸಿರಾಜ್ ಎಂದಿದ್ದರಷ್ಟೇ. ಜನಾಂಗೀಯ ನಿಂದನೆಯೆಲ್ಲಾ ಕಟ್ಟು ಕತೆ. ಸಿರಾಜ್ ತಮ್ಮ ಬೌಲಿಂಗ್ ನಲ್ಲಿ ಎರಡೆರಡು ಸಿಕ್ಸರ್ ಹೊಡೆಸಿಕೊಂಡ ಮೇಲೆ ಬೌಂಡರಿ ಬಳಿ ಫೀಲ್ಡಿಂಗ್ ಮಾಡುತ್ತಿದ್ದಾಗ ಈ ರೀತಿ ಕಟ್ಟು ಕತೆ ಹೇಳಿದ್ದಾರೆ ಎಂದು ಆಪಾದಿಸಿದ್ದಾರೆ. ಜನಾಂಗೀಯ ನಿಂದನೆ ಆರೋಪದ ಬಗ್ಗೆ ಇದೀಗ ಐಸಿಸಿ ತನಿಖೆ ನಡೆಸುತ್ತಿದೆ. ಅದಾದ ಬಳಿಕವಷ್ಟೇ ಸತ್ಯಾಂಶ ಹೊರಬೀಳಲಿದೆ.