ಕೊಲೊಂಬೊ: ಬ್ಯಾಟಿಂಗ್ ಕ್ರಮಾಂಕದಲ್ಲಿ ದಿಡೀರ್ ಬದಲಾವಣೆ ಮಾಡುತ್ತಿರುವ ನಾಯಕ ವಿರಾಟ್ ಕೊಹ್ಲಿ ಪ್ರಯೋಗದ ಬಗ್ಗೆ ಕನ್ನಡಿಗ ಬ್ಯಾಟ್ಸ್ ಮನ್ ಮನೀಶ್ ಪಾಂಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮನೀಶ್ ಪಾಂಡೆ ನಾಲ್ಕನೇ ಏಕದಿನ ಪಂದ್ಯದಲ್ಲಿ ಅವಕಾಶ ಸಿಕ್ಕರೂ ಕೆಳ ಕ್ರಮಾಂಕದಲ್ಲಿ ಆಡಿದ್ದರು. ಇನ್ನೊಂದೆಡೆ ಸ್ವತಃ ಕೊಹ್ಲಿ ತೃತೀಯ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡಿದ್ದರು. ಮತ್ತೊಂದೆಡೆ ಓಪನಿಂಗ್ ಸ್ಪೆಷಲಿಸ್ಟ್ ಕೆಎಲ್ ರಾಹುಲ್ ಗೆ ಮಧ್ಯಮ ಕ್ರಮಾಂಕ ನೀಡಲಾಗುತ್ತಿದೆ.
ಆದರೆ ನಾಯಕ ಈ ಎಲ್ಲಾ ಬದಲಾವಣೆಗಳನ್ನು ಮಾಡುತ್ತಿರುವುದು 2019 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಎಂದು ಪಾಂಡೆ ಸಮರ್ಥಿಸಿಕೊಂಡಿದ್ದಾರೆ. ‘ರಾಹುಲ್ ವಿಚಾರಕ್ಕೆ ಬರುವುದಾದರೆ ದಿಡೀರ್ ಎಂದು ಅವರ ಕ್ರಮಾಂಕ ಬದಲಾಗಿದೆ. ಆರಂಭಿಕ ಸ್ಥಾನ ಅವರಿಗೆ ಅಭ್ಯಾಸವಾಗಿತ್ತು.
ಇದೀಗ ಮಧ್ಯಮ ಕ್ರಮಾಂಕದಲ್ಲಿ ಹೇಗೆ ಆಡಬೇಕು ಎಂದು ಅವರು ತಿಳಿದುಕೊಳ್ಳಲಿದ್ದಾರೆ. ಈ ಪರಿಸ್ಥಿತಿಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗಬಹುದು’ ಎಂದು ಪಾಂಡೆ ಅಭಿಪ್ರಾಯಪಟ್ಟಿದ್ದಾರೆ.