ಚೆನ್ನೈ: ಟೀಂ ಇಂಡಿಯಾ ನಾಯಕತ್ವ ತ್ಯಜಿಸಿ ಧೋನಿ ಅದೆಷ್ಟೋ ಕಾಲವಾಯ್ತು. ಹಾಗಿದ್ದರೂ ನಾಯಕತ್ವ ಮಾತ್ರ ಅವರನ್ನು ಬಿಟ್ಟು ಹೋಗುತ್ತಿಲ್ಲ. ಚೆನ್ನೈಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಧೋನಿ ಸ್ಟಂಪ್ ಹಿಂದುಗಡೆ ನಿಂತು ಮಾತನಾಡಿದ್ದು ಮೈಕ್ರೋಫೋನ್ ನಲ್ಲಿ ದಾಖಲಾಗಿದ್ದು, ಇದಕ್ಕೆ ಪುಷ್ಠಿ ನೀಡಿದೆ.
ಗ್ಲೆನ್ ಮ್ಯಾಕ್ಸ್ ವೆಲ್ ಭಾರತಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತಿರುವಾಗ ಕೊಹ್ಲಿ ವೇಗದ ಬೌಲರ್ ಗಳ ಮೊರೆ ಹೋಗಲು ಯತ್ನಿಸಿದರು. ಆದರೆ ಧೋನಿ ಕೊಹ್ಲಿ ಮನ ಒಲಿಸಿ ಸ್ಪಿನ್ನರ್ ಗಳನ್ನೇ ಕಣಕ್ಕಿಳಿಸಲು ಯಶಸ್ವಿಯಾದರು. ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ ಬೌಲಿಂಗ್ ಮಾಡುವಾಗ ಪದೇ ಪದೇ ಧೋನಿ ಅವರಿಗೆ ಯಾವ ರೀತಿ ಬೌಲಿಂಗ್ ಮಾಡಬೇಕೆಂದು ಸೂಚನೆ ಕೊಡುತ್ತಿದ್ದರು.
ಇದು ಸ್ಟಂಪ್ ಮೈಕ್ರೋಫೋನ್ ನಲ್ಲಿ ದಾಖಲಾಗಿದೆ. ಅಲ್ಲದೆ ಒಂದು ಹಂತದಲ್ಲಿ ಚಾಹಲ್ ತಮ್ಮ ಸೂಚನೆಗೆ ತಕ್ಕ ಹಾಗೆ ಬೌಲಿಂಗ್ ಮಾಡದೇ ಇದ್ದಾಗ ತೂ ಭೀ ಸುನ್ತಾ ನಹೀ (ನೀನೂ ನನ್ನ ಮಾತು ಕೇಳಲ್ವಾ) ಎಂದು ಆಕ್ಷೇಪಿಸುತ್ತಿರುವುದೂ ದಾಖಲಾಗಿದೆ. ನಂತರ ಧೋನಿ ಸಲಹೆಯಂತೆ ಯುವ ಬೌಲರ್ ಗಳು ಬೌಲಿಂಗ್ ಮಾಡಿ ಯಶಸ್ವಿಯಾದರು.
ಪಂದ್ಯ ಮುಗಿದ ಬಳಿಕ ಯಜುವೇಂದ್ರ ಚಾಹಲ್ ಧೋನಿ ಸಲಹೆ ನೀಡುತ್ತಿದ್ದುದ್ದನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ, ಅವರ ಸಲಹೆ ಮೇರೆಗೆ ಬೌಲಿಂಗ್ ನಡೆಸಿದ್ದಕ್ಕೆ ತಮಗೆ ವಿಕೆಟ್ ಸಿಕ್ಕಿದ್ದು ಎಂದಿದ್ದಾರೆ. ಅಂತೂ ನಾಯಕ ಕೊಹ್ಲಿಯೇ ಆದರೂ, ಯೋಜನೆಗಳೆಲ್ಲಾ ಧೋನಿಯದ್ದು ಎನ್ನುವುದು ಇದರಿಂದ ಸಾಬೀತಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ