ಮುಂಬೈ: ಒಬ್ಬ ಪುರುಷನ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಯಾವತ್ತೂ ಇರುತ್ತಾಳೆ ಎಂಬ ಮಾತಿದೆ. ಆದರೆ ಒಬ್ಬ ಮಹಿಳೆ ಯಶ್ಸಿನ ಹಾದಿ ಹಿಡಿಯಬೇಕಾದರೆ ಅದರ ಹಿಂದೆ ನೂರಾರು ಕಷ್ಟದ ಹಾದಿ ಸವೆಸಬೇಕಾಗುತ್ತದೆ.
ಇದೀಗ ವಿಶ್ವಕ್ರಿಕೆಟ್ ಲೋಕದಲ್ಲಿ ಸೆನ್ಷೇಷನ್ ಹುಟ್ಟು ಹಾಕಿರುವ ಭಾರತೀಯ ಕ್ರಿಕೆಟ್ ಆಟಗಾರ್ತಿ ಶಿಫಾಲಿ ವರ್ಮ ಸಾಹಸಗಾಥೆ ನಿಮಗೆ ಗೊತ್ತಾ? ಆಕೆ ಇಂದು ಮಹಿಳಾ ಸೆಹ್ವಾಗ್ ಎಂದೆಲ್ಲಾ ಕರೆಯಿಸಿಕೊಳ್ಳುತ್ತಾಳೆ. ಆದರೆ ಈ ಪರಿ ಹೆಸರು ಮಾಡುವ ಮುನ್ನ ಆಕೆ ಯಾವ ರೀತಿ ಕಷ್ಟಪಟ್ಟಿದ್ದಳು ಗೊತ್ತಾ?
ಇನ್ನೂ ಹದಿನಾರರ ಹರೆಯ. ಅಂದರೆ ಇನ್ನೂ ಎಸ್ ಎಸ್ ಎಲ್ ಸಿ ಮುಗಿಸಿ ಹದಿಹರೆಯದ ಸಹಜ ಖುಷಿ ಅನುಭವಿಸುವ ವಯಸ್ಸು. ಆದರೆ ಆಕೆಯ ಕಣ್ಣಲ್ಲಿ ಕಾಣುತ್ತಿರುವುದು ಒಂದೇ ಕನಸ್ಸು. ಅದು ಕ್ರಿಕೆಟ್. ಇದು ಇಂದು ನಿನ್ನೆಯದಲ್ಲ. ಚಿಕ್ಕವಳಿಂದಲೂ ಅವಳನ್ನು ಕ್ರಿಕೆಟ್ ಆಟಗಾರ್ತಿಯಾಗಿ ಮಾಡಕೆಂಬುದೇ ತಂದೆಯ ಕನಸಾಗಿತ್ತಂತೆ.
ಆದರೆ ಅದು ಅಷ್ಟು ಸುಲಭವಾಗಿರಲಿಲ್ಲ. ಕ್ರಿಕೆಟ್ ಎಂದರೆ ಪುರುಷರ ಆಟ ಎಂಬ ಕಾಲ. ಹೀಗಾಗಿ ಅಕ್ಕಪಕ್ಕದ ಮನೆಯವರು, ಬಂಧುಗಳು ಈಕೆ ಕ್ರಿಕೆಟ್ ಸೇರುತ್ತಾಳೆಂದಾಗ ಸಹಜವಾಗಿಯೇ ಟಾಂಗ್ ಕೊಡುತ್ತಿದ್ದರಂತೆ. ಆದರೆ ಹೇಳಿ ಕೇಳಿ ಹರ್ಯಾಣದ ಹುಡುಗಿ. ಜತೆಗೆ ತಂದೆಯ ಸಪೋರ್ಟ್ ಬೇರೆ.
ಇದಕ್ಕೆಲ್ಲಾ ತಲೆಯೇ ಕೆಡಿಸಿಕೊಳ್ಳದ ಆಕೆಯ ತಂದೆ ಮಗಳನ್ನು ಒಂದು ಉತ್ತಮ ಕ್ರಿಕೆಟ್ ಅಕಾಡೆಮಿಗೆ ಸೇರಿಸಲು ಯೋಚಿಸಿದರು. ಅಲ್ಲಿಯೂ ವಿಘ‍್ನವೇ. ಯಾಕೆಂದರೆ ಹುಡುಗಿಯರನ್ನು ಕ್ರಿಕೆಟ್ ಅಕಾಡೆಮಿಗೆ ಸೇರಿಸಲು ಯಾರೂ ತಯಾರಿರಲಿಲ್ಲ. ಕೊನೆಗೂ ಒಂದು ಅಕಾಡೆಮಿಗೆ ಆಕೆಯನ್ನು ಸೇರಿಸಲಾಯಿತು.
ಆಗಿನ್ನೂ ಭಾರತದಲ್ಲಿ ಮಹಿಳಾ ಕ್ರಿಕೆಟ್ ಇಷ್ಟೊಂದು ಜನಪ್ರಿಯವಾಗಿರಲಿಲ್ಲ. ಹೀಗಾಗಿ ಸ್ಥಳೀಯ ತಂಡಗಳಲ್ಲಿ ಈಕೆ ಮಹಿಳೆ ಎಂಬ ಕಾರಣಕ್ಕೆ ಆಟಕ್ಕೆ ಸೇರಿಸಿಕೊಳ್ಳುತ್ತಿರಲಿಲ್ಲವಂತೆ. ಹಾಗಾಗಿ ಶಿಫಾಲಿಯ ತಂದೆ ಆಕೆಯ ಕೂದಲಿಗೆ ಕತ್ತರಿ ಹಾಕಿ ಹುಡುಗರ ವೇಷ ಧರಿಸಿ ಪುರುಷರೊಂದಿಗೆ ಕ್ರಿಕೆಟ್ ಆಡಲು ಕಳುಹಿಸುತ್ತಿದ್ದರಂತೆ!
ಅಲ್ಲಿ ಪುರುಷ ಕ್ರಿಕೆಟಿಗರೊಂದಿಗೆ ಆಡುವಾಗ ಸಹಜವಾಗಿಯೇ ಆಕೆಗೆ ಏಟು, ನೋವು ಸಾಮಾನ್ಯ ಎನ್ನುವಂತಾಗಿತ್ತು. ಆದರೆ ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳದ ಆಕೆ ನಿತ್ಯವೂ 8 ಕಿ.ಮೀ. ದೂರ ಸೈಕಲ್ ತುಳಿದು ಕ್ರಿಕೆಟ್ ತರಬೇತಿ ಪಡೆಯುವುದನ್ನು ಮಾತ್ರ ಬಿಡಲಿಲ್ಲ.
ಅದೇ ಹಠ, ಅದೇ ಛಲ.. ಆಕೆಯನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿದೆ. ಇಂದು ವಿಶ್ವ ಮಹಿಳಾ ರ್ಯಾಂಕಿಂಗ್ ನಲ್ಲಿ ನಂ.1 ಸ್ಥಾನದಲ್ಲಿದ್ದಾಳೆ. ಇದಕ್ಕಿಂತ ಹೆಮ್ಮೆ ಬೇಕೆ? ಆಕೆ ಒಬ್ಬ ಮಹಿಳೆಯಾಗಿ ಮಾಡಿರುವ ಸಾಧನೆ ಸಣ್ಣದೇ?!