ಲಂಡನ್: ಟೀಂ ಇಂಡಿಯಾದಲ್ಲಿ ಕೋಚ್ ಅನಿಲ್ ಕುಂಬ್ಳೆ ಮತ್ತು ನಾಯಕ ವಿರಾಟ್ ಕೊಹ್ಲಿ ನಡುವೆ ಎಲ್ಲವೂ ಸರಿಯಿಲ್ಲ ಎಂದು ಕೆಲವು ದಿನಗಳಿಂದ ವರದಿಗಳು ಬರುತ್ತಲೇ ಇದ್ದವು. ಇವರಿಬ್ಬರು ನಿನ್ನೆ ನಡೆದ ನೆಟ್ ಸೆಷನ್ ನಲ್ಲಿ ಹೇಗಿದ್ದರು ಗೊತ್ತಾ?
ಮಾಧ್ಯಮಗಳಲ್ಲಿ ವರದಿಯಾದಂತೆ ಇವರಿಬ್ಬರೂ ನೆಟ್ ನಲ್ಲಿ ಮುಖ ಮುಖ ನೋಡದಂತಹ ಪರಿಸ್ಥಿತಿಯಲ್ಲಿ ನಿನ್ನೆ ಕಂಡು ಬರಲಿಲ್ಲ. ಬದಲಿಗೆ ವಿರಾಟ್ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡಲು ಸ್ವತಃ ಕುಂಬ್ಳೆಯೇ ಬಂದು ಬಾಲ್ ಎಸೆದು ಸಹಕರಿಸಿದರು. ಸುಮಾರು 20 ನಿಮಿಷಗಳ ಕಾಲ ಇವರಿಬ್ಬರು ಆರಾಮವಾಗಿ ನೆಟ್ಸ್ ನಲ್ಲಿ ಕಾಲ ಕಳೆದರು.
ನಾಯಕ ಸರಿಯಾಗಿ ಅಭ್ಯಾಸ ಮಾಡಿದ್ದನ್ನು ಖಚಿತಪಡಿಸಿಕೊಂಡ ಮೇಲಷ್ಟೇ ಕುಂಬ್ಳೆ ಇನ್ನೊಂದು ನೆಟ್ ನಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದ ಯುವರಾಜ್ ಕಡೆಗೆ ತೆರಳಿದರು. ಅಲ್ಲದೆ, ಮಾಧ್ಯಮಗಳಲ್ಲಿ ವರದಿಯಾದಂತೆ ಗಂಗೂಲಿ ಟೀಂ ಇಂಡಿಯಾ ಆಟಗಾರರನ್ನು ಕೋಚ್ ಕುರಿತು ವರದಿ ಕೇಳಿಲ್ಲ ಎಂದು ಮೂಲಗಳು ಹೇಳಿವೆ.
ಇದೇ ವೇಳೆ ನಿನ್ನೆ ಮಳೆ ಬಂದಿದ್ದರಿಂದ ಟೀಂ ಇಂಡಿಯಾ ಆಟಗಾರರು ಹೊರಾಂಗಣದಲ್ಲಿ ಅಭ್ಯಾಸ ಮಾಡಲು ಸಾಧ್ಯವಾಗದೇ ಒಳಾಂಗಣದಲ್ಲಿ ಭಾರತ-ಪಾಕಿಸ್ತಾನ ಪಂದ್ಯಕ್ಕೆ ತಯಾರಿ ನಡೆಸಿದರು.