ಲಂಡನ್: ಕ್ರಿಕೆಟ್ ನಲ್ಲಿ ರಾತ್ರಿ ಬೆಳಗಾಗುವಷ್ಟರಲ್ಲಿ ಸ್ಟಾರ್ ಆಗಬಹುದು ಎಂಬುದಕ್ಕೆ ಹರ್ಮನ್ ಪ್ರೀತ್ ಕೌರ್ ರ ವಿಶ್ವಕಪ್ ಸೆಮಿಫೈನಲ್ ಪಂದ್ಯದ ಮ್ಯಾರಥಾನ್ ಇನಿಂಗ್ಸ್ ಸಾಕ್ಷಿ. ಅಷ್ಟಕ್ಕೂ ಈ ಯುವ ಬ್ಯಾಟ್ಸ್ ವುಮನ್ ಗೆ ಇಷ್ಟೊಂದು ಧೈರ್ಯ ಹೇಗೆ ಬಂತು?
ಹರ್ಮನ್ ಪ್ರೀತ್ ಕೌರ್ ನಿನ್ನೆ ನಡೆದ ಮಹಿಳಾ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾದಂತಹ ದೈತ್ಯ ತಂಡದ ವಿರುದ್ಧ 115 ಬಾಲ್ ಗಳಲ್ಲಿ 171 ರನ್ ಚಚ್ಚಿ ಮೆಚ್ಚುಗೆಗೆ ಪಾತ್ರರಾದರು. ಇದರಲ್ಲಿ 7 ಸಿಕ್ಸರ್ ಗಳೂ ಇದ್ದವು. ಮೊದಲ ಅರ್ಧಶತಕ ಗಳಿಸಲು ಸ್ವಲ್ಪ ಸಮಯ ತೆಗೆದುಕೊಂಡ ಹರ್ಮನ್ ನಂತರ ಶತಕ ಮತ್ತು ಮತ್ತೊಂದು ಅರ್ಧಶತಕ ಗಳಿಸಲು ಕೇವಲ 43 ಬಾಲ್ ತೆಗೆದುಕೊಂಡರಷ್ಟೇ.
ಇವರ ಈ ಮ್ಯಾರಥಾನ್ ಇನಿಂಗ್ಸ್ ನಿಂದಾಗಿ ಭಾರತಕ್ಕೆ ಆಸ್ಟ್ರೇಲಿಯಾದಂತಹ ದೈತ್ಯ ಬ್ಯಾಟಿಂಗ್ ಲೈನ್ ಅಪ್ ಇರುವ ತಂಡಕ್ಕೆ 281 ರನ್ ಗಳ ಬೃಹತ್ ಮೊತ್ತದ ಗುರಿ ನೀಡಲು ಸಾಧ್ಯವಾಯಿತು. ಕೊನೆಗೆ ಭಾರತೀಯ ಬೌಲರ್ ಗಳ ಕರಾರುವಾಕ್ ದಾಳಿಗೆ ಸಿಲುಕಿ ಆಸೀಸ್ ಪಡೆ ನಿಗದಿತ 40.1 ಓವರ್ ಗಳಲ್ಲಿ 245 ರನ್ ಗಳಿಗೆ ಆಲೌಟ್ ಆಗಿ 36 ರನ್ ಗಳ ಜಯ ಸಾಧಿಸಿತು.
ಹರ್ಮನ್ ಗೆ ಆಸ್ಟ್ರೇಲಿಯಾ ತಂಡ ಹೊಸದೇನಲ್ಲ. ಆಸ್ಟ್ರೇಲಿಯಾ ನೆಲದಲ್ಲೇ ನಡೆದ ಬಿಗ್ ಬ್ಯಾಶ್ 20-20 ಕ್ರಿಕೆಟ್ ಲೀಗ್ ಗಳಲ್ಲಿ ಬುಲ್ಲರ್ ತಂಡವನ್ನು ಪ್ರತಿನಿಧಿಸಿದ್ದ ಅವರು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದವರು. ಬಿಗ್ ಬ್ಯಾಶ್ ಲೀಗ್ ನಲ್ಲಿ ಒಮ್ಮೆ ಅಶಿಸ್ತಿನ ವರ್ತನೆ ತೋರಿದ್ದಾರೆಂಬ ಆರೋಪದಲ್ಲಿ ಆಕೆ ಮೇಲೆ ಕ್ರಿಕೆಟ್ ಆಸ್ಟ್ರೇಲಿಯಾ ಶಿಸ್ತು ಕ್ರಮವನ್ನೂ ಕೈಗೊಂಡಿತ್ತು.
ಇಂದು ಅದೇ ಹರ್ಮನ್ ಅದೇ ಆಸ್ಟ್ರೇಲಿಯನ್ನರ ಗರ್ವ ಭಂಗ ಮಾಡಿ ಭಾರತವನ್ನು ಮತ್ತೊಮ್ಮೆ ವಿಶ್ವಕಪ್ ಫೈನಲ್ ಗೇರಲು ಸಹಾಯ ಮಾಡಿದ್ದಾರೆ. ಬಹುಶಃ ಅವರು ನಿನ್ನೆ ಬಿರುಗಾಳಿಯಂತೆ ಬಂದು ಬ್ಯಾಟ್ ಬೀಸದಿದ್ದರೆ ಭಾರತದ ಮಹಿಳೆಯರಿಗೆ ಈ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲವೇನೋ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ