ನವದೆಹಲಿ: ದೆಹಲಿಯಲ್ಲಿ ವಾಯುಮಾಲಿನ್ಯ ಮೇರೆ ಮೀರಿರುವಾಗ ಇಲ್ಲಿನ ಸಂಸದ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಜಿಲೇಬಿ ಸೇವಿಸುವ ಫೋಟೋ ಹಾಕಿದ್ದಕ್ಕೆ ಟ್ರೋಲ್ ಗೊಳಗಾಗಿದ್ದರು.
ದೆಹಲಿಯಲ್ಲಿ ವಾಯು ಮಾಲಿನ್ಯ ತಡೆಗೆ ಸಿಎಂ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ನಡೆಯುತ್ತಿರಬೇಕಾದರೆ ಇಂಧೋರ್ ನಲ್ಲಿ ಭಾರತ ಮತ್ತು ಬಾಂಗ್ಲಾ ನಡುವಿನ ಟೆಸ್ಟ್ ಪಂದ್ಯದ ವೇಳೆ ವಿವಿಎಸ್ ಲಕ್ಷ್ಮಣ್ ಜತೆಗೆ ಗಂಭೀರ್ ಜಿಲೇಬಿ ಸೇವಿಸುವ ಫೋಟೋ ಪ್ರಕಟಿಸಿದ್ದರು. ಇದರಿಂದ ಅವರನ್ನು ಟ್ರೋಲ್ ಮಾಡಲಾಗಿತ್ತು. ಈ ಬಗ್ಗೆ ಅವರೀಗ ಪ್ರತಿಕ್ರಿಯಿಸಿದ್ದಾರೆ.
‘ಒಂದು ವೇಳೆ ನಾನು ಜಿಲೇಬಿ ಸೇವಿಸುವುದು ಬಿಟ್ಟರೆ ದೆಹಲಿಯಲ್ಲಿ ವಾಯುಮಾಲಿನ್ಯ ಕಡಿಮೆಯಾಗುತ್ತದೆ ಎಂದಾದರೆ ಜಿಲೇಬಿ ಬಿಡಲೂ ಸಿದ್ಧ. ನಾನು ಈ ಫೋಟೋ ಪ್ರಕಟಿಸಿದ ಹತ್ತೇ ನಿಮಿಷದಲ್ಲಿ ಟ್ರೋಲ್ ಮಾಡಲು ನಿಮ್ಮೆಲ್ಲಾ ಸಾಮರ್ಥ್ಯ ಬಳಸುತ್ತೀರಿ ಎಂದಾದರೆ, ಅದೇ ಸಾಮರ್ಥ್ಯವನ್ನು ವಾಯು ಮಾಲಿನ್ಯ ತಡೆಗೆ ಕೈಗೊಂಡರೂ ಸಾಕು. ದೆಹಲಿ ವಾಯ ಮಾಲಿನ್ಯ ಮುಕ್ತವಾಗುತ್ತಿತ್ತು’ ಎಂದು ಗಂಭೀರ್ ಕಿಡಿ ಕಾರಿದ್ದಾರೆ.