ಕೋಲ್ಕೊತ್ತಾ: ಧೋನಿ ಇತ್ತೀಚೆಗೆ ಕ್ರಿಕೆಟೇತರ ವಿಷಯಕ್ಕೆ ಸುದ್ದಿ ಮಾಡುತ್ತಿದ್ದಾರೆ. ಅವರು ಕ್ರಿಕೆಟಿಗನಾಗಿ ಅಷ್ಟೊಂದು ಹೆಸರು ಮಾಡಿದ್ದರೂ ತಮ್ಮ ಹಳೆಯ ದಿನಗಳನ್ನು ಮರೆತಿಲ್ಲ ಎನ್ನುವುದಕ್ಕೆ ಇದು ಮತ್ತೊಂದು ಉದಾಹರಣೆ.
ಹಳೆಯ ದಿನಗಳಲ್ಲಿ ಧೋನಿ ಕೋಲ್ಕೊತ್ತಾದಲ್ಲಿ ಥಾಮಸ್ ಎಂಬವರ ಟೀ ಅಂಗಡಿಯಲ್ಲಿ ಪ್ರತಿ ನಿತ್ಯ ಚಹಾ ಸೇವಿಸುತ್ತಿದ್ದರಂತೆ. ಸದ್ಯಕ್ಕೆ ಧೋನಿ ಕೋಲ್ಕೊತ್ತಾದಲ್ಲಿ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಆಡುತ್ತಿದ್ದಾರೆ. ಪಂದ್ಯ ಮುಗಿಸಿ ಹೊರ ಬರಬೇಕೆನ್ನುವಷ್ಟರಲ್ಲಿ ಅವರಿಗೆ ಯಾರೋ ನಿಮ್ಮ ಹಳೆಯ ಗೆಳೆಯ ನಿಮ್ಮನ್ನು ನೋಡಲು ಕಾಯುತ್ತಿದ್ದಾರೆ ಎಂದಿದ್ದಾರೆ.
ಹೊರ ಬಂದು ನೋಡಿದರೆ ಥಾಮಸ್! ತಕ್ಷಣ ಚಾಯ್ ವಾಲಾ ಗೆಳೆಯನ ಗುರುತು ಹಿಡಿದ ಧೋನಿ ಹೆಗಲ ಮೇಲೆ ಕೈ ಹಾಕಿ ಸುಖ ದುಃಖ ವಿಚಾರಿಸಿಕೊಂಡರು. ಥಾಮಸ್ ಗೆ ಆನಂದ ತಡೆಯಲಾಗಲಿಲ್ಲ. ಈಗಲೂ ಧೋನಿ ತನ್ನನ್ನು ನೆನಪಿಟ್ಟುಕೊಂಡಿದ್ದಾರಲ್ವಾ ಎನ್ನುವುದೇ ಥಾಮಸ್ ಗೆ ಖುಷಿಯ ವಿಚಾರ. ಅದೇ ಖುಷಿಯಲ್ಲಿ ರೈಲ್ವೇ ಸ್ಟೇಷನ್ ಪಕ್ಕ ಇರುವ ತನ್ನ ಟೀ ಸ್ಟಾಲ್ ಗೆ ಧೋನಿ ಎಂದು ಹೆಸರಿಟ್ಟು ಗೆಳೆಯನಿಗೆ ಗೌರವ ಸಲ್ಲಿಸಿದ್ದಾರೆ. ಧೋನಿ ಕೂಡಾ ಕೋಲ್ಕೊತ್ತಾದಲ್ಲಿರುವ ತಮ್ಮ ಗೆಳೆಯರಿಗೆ ನೀಡಿದ ಪಾರ್ಟಿಗೆ ಚಾಯ್ ವಾಲಾನನ್ನೂ ಆಹ್ವಾನಿಸಿ ಫ್ರೆಂಡ್ ಶಿಪ್ ಏನೆಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.