ಮುಂಬೈ: ಕುಲದೀಪ್ ಯಾದವ್ ಎಂಬ ಯುವ ಸ್ಪಿನ್ನರ್ ತಾವು ಟೆಸ್ಟ್ ಗೆ ಪದಾರ್ಪಣೆ ಮಾಡಿದ ಮೊದಲ ಪಂದ್ಯದ ನೆನಪನ್ನು ಸಂದರ್ಶನವೊಂದರಲ್ಲಿ ಮೆಲುಕು ಹಾಕಿದ್ದಾರೆ.
ಧರ್ಮಶಾಲಾದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಕುಲದೀಪ್ ಮೊದಲ ಪಂದ್ಯವಾಡಿದ್ದರು. ಈ ಸಂದರ್ಭದಲ್ಲಿ ಟೀಂ ಇಂಡಿಯಾ ಕೋಚ್ ಆಗಿದ್ದವರು ಅನಿಲ್ ಕುಂಬ್ಳೆ.
ಪಂದ್ಯದ ಹಿಂದಿನ ದಿನ ಪ್ರಾಕ್ಟೀಸ್ ಸಮಯದಲ್ಲಿ ಕುಲದೀಪ್ ಬಳಿ ಬಂದಿದ್ದ ಅನಿಲ್ ಕುಂಬ್ಳೆ ‘ನಾಳೆ ನೀನು ಆಡ್ತೀಯ. ಆದರೆ ಐದು ವಿಕೆಟ್ ಕೀಳಬೇಕು’ ಎಂದಿದ್ದರಂತೆ. ಇದರಿಂದ ಖುಷಿಯಾದ ಕುಲದೀಪ್ ‘ಖಂಡಿತಾ ಸರ್. ಐದು ವಿಕೆಟ್ ಕೀಳುವೆ’ ಎಂದಿದ್ದರಂತೆ. ಆ ಪಂದ್ಯದಲ್ಲಿ ಭಾರತದ ಪರ ಅದ್ಭುತ ಬೌಲಿಂಗ್ ಪ್ರದರ್ಶಿಸಿದ್ದ ಕುಲದೀಪ್ ಡೇವಿಡ್ ವಾರ್ನರ್ ವಿಕೆಟ್ ಸೇರಿದಂತೆ ನಾಲ್ಕು ವಿಕೆಟ್ ಕಬಳಿಸಿದ್ದರು. ಆ ಪಂದ್ಯವನ್ನು ಭಾರತ ಗೆದ್ದಿತ್ತು ಕೂಡಾ. ಹೀಗಾಗಿ ಅದು ನನಗೆ ಸ್ಮರಣೀಯ ಪಂದ್ಯವಾಗಿತ್ತು ಎಂದು ಕುಲದೀಪ್ ಸ್ಮರಿಸಿಕೊಂಡಿದ್ದಾರೆ.