ಅನಿಲ್ ಕುಂಬ್ಳೆ ಅವರನ್ನು ಭಾರತ ಕ್ರಿಕೆಟ್ ತಂಡದ ಕೋಚ್ ಆಗಿ ನೇಮಿಸಿದ ಬಳಿಕ ಇದೇ ಮೊದಲ ಬಾರಿಗೆ ರವಿ ಶಾಸ್ತ್ರಿ ಮತ್ತು ಸೌರವ್ ಗಂಗೂಲಿ ಒಂದೇ ಸಾರ್ವಜನಿಕ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಗುರುವಾರದಿಂದ ಪ್ರಾರಂಭವಾಗಿರುವ ಭಾರತ - ನ್ಯೂಜಿಲೆಂಡ್ ನಡುವಿನ ಟೆಸ್ಟ್ ಕ್ರಿಕೆಟ್ ಪಂದ್ಯ ಭಾರತದ ಪಾಲಿಗೆ 500ನೇ ಟೆಸ್ಟ್ ಪಂದ್ಯವಾಗಿದ್ದರಿಂದ ಬಿಸಿಸಿಐ ಆಹ್ವಾನಿಸಿದ್ದ ಕ್ರಿಕೆಟ್ ದಿಗ್ಗಜರ ಸಾಲಿನಲ್ಲಿ ಇವರು ಕೂಡ ಸೇರಿದ್ದರು.
ಭಾರತ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರನ ಆಯ್ಕೆ ಪ್ರಕ್ರಿಯೆಯಲ್ಲಿ ಗಂಗೂಲಿ ಶಾಸ್ತ್ರಿ ಅವರನ್ನು ಅವಮಾನಿಸಿದ್ದಾರೆಂಬ ಆರೋಪ ಕೇಳಿ ಬಂದಿತ್ತು.
ಕ್ರಿಕೆಟ್ ಸಲಹಾ ಸಮಿತಿ ತಮ್ಮ ಸಂದರ್ಶನ ನಡೆಸುವಾಗ ಅಲಭ್ಯರಾಗುವ ಮೂಲಕ ಗಂಗೂಲಿ ತಮಗೆ ಅಗೌರವ ತೋರಿದ್ದಾರೆಂದು ಶಾಸ್ತ್ರಿ ಆಕ್ರೋಶ ವ್ಯಕ್ತ ಪಡಿಸಿದ್ದರು.
ಆದರೆ ಅವರ ಆರೋಪವನ್ನು ತಳ್ಳಿ ಹಾಕಿದ್ದ ಗಂಗೂಲಿ ತಾವು ಅಧ್ಯಕ್ಷರಾಗಿರುವ ಬಂಗಾಳ್ ಕ್ರಿಕೆಟ್ ಸಮಿತಿಯ ಅತಿ ಮಹತ್ವದ ಸಭೆಗೆ ಹಾಜರಾಗಲು ತೆರಳಿದ್ದಕ್ಕೆ ತಾವು ಗೈರು ಹಾಜರಾಗಿದ್ದಾಗಿ ಹೇಳಿದ್ದರು. ಬಳಿಕ ಸಹ ಅವರ ನಡುವೆ ವಾಕ್ಸಮರ ಮುಂದುವರೆದಿತ್ತು.
ಈ ಘಟನೆಯ ಬಳಿಕ ಶಾಸ್ತ್ರಿ ಸ್ವಲ್ಪ ದಿನ ಬ್ರೇಕ್ ತೆಗೆದುಕೊಂಡು ಬಳಿಕ ಬಿಸಿಸಿಐನ ಮಾಧ್ಯಮ ಪ್ರತಿನಿಧಿಯಾಗಿ ಮುಂದುವರೆದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ