ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರತೀ ಪಂದ್ಯದಲ್ಲೂ ಶತಕದ ಮೇಲೆ ಶತಕ ಸಿಡಿಸಲು ಅವರೇನು ದೇವಮಾನವರಲ್ಲ. ಅವರೂ ನಮ್ಮಂತೆ ಮನುಷ್ಯರೇ. ಕೆಲವೊಮ್ಮೆ ವಿಫಲರಾಗುವುದು ಸಹಜ… ಹೀಗಂತ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲೇ ಕೇವಲ 13 ರನ್ ಗಳಿಸಿದ್ದಕ್ಕೆ ಕೊಹ್ಲಿ ಮೇಲೆ ಟೀಕೆಗಳ ಸುರಿಮಳೆ ಸುರಿಸುತ್ತಿರುವುದಕ್ಕೆ ಮಾಜಿ ನಾಯಕ ಈ ರೀತಿ ಪ್ರತಿಕ್ರಿಯಿಸಿದ್ದಾರೆ. “ಕೊಹ್ಲಿ ಕೂಡಾ ಮನುಷ್ಯ. ಹಾಗಾಗಿ ಒಂದಲ್ಲ ಒಂದು ದಿನ ವಿಫಲವಾಗುವುದು ಸಹಜ. ಬಹುಶಃ ಅವರು ಲೂಸ್ ಶಾಟ್ ಆಡಿದ್ದಕ್ಕೇ ಔಟಾದರು” ಎಂದು ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.
ಖಂಡಿತವಾಗಿಯೂ ಮುಂದಿನ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ತಿರುಗೇಟು ನೀಡುತ್ತಾರೆ ಎಂದು ಗಂಗೂಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅವರಿಗೂ ಯಾವತ್ತೂ ಗೆಲ್ಲುತ್ತಲೇ ಇರಲು ಸಾಧ್ಯವಿಲ್ಲ. ಸಚಿನ್ ತೆಂಡುಲ್ಕರ್ ಕೂಡಾ ಬೆನ್ನು ಬೆನ್ನಿಗೆ ನಾಲ್ಕು ದ್ವಿಶತಕ ಸಿಡಿಸಿದ್ದನ್ನು ನಾವು ನೋಡಿಲ್ಲ. ಅದನ್ನು ಕೊಹ್ಲಿ ಮಾಡಿದ್ದಾರೆ. ನಿಜಕ್ಕೂ ಅವರು ಪುಟಿದೇಳುತ್ತಾರೆ ಎಂದು ಗಂಗೂಲಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.