ಲಂಡನ್: ಭಾರತ ಮತ್ತು ದ.ಆಫ್ರಿಕಾ ನಡುವೆ ನಿನ್ನೆ ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಮತ್ತೊಮ್ಮೆ ಆಫ್ರಿಕನ್ನರು ಚೋಕರ್ಸ್ ಹಣೆ ಪಟ್ಟಿ ಹೊತ್ತುಕೊಂಡರು. ಈ ಪಂದ್ಯದಲ್ಲಿ ಏನೇನು ದಾಖಲೆಗಳಾದವು ನೋಡೋಣ.
ಭಾರತದ ಆರಂಭಿಕ ಬ್ಯಾಟ್ಸ್ ಮನ್ ಶಿಖರ್ ಧವನ್ ಈ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದಲ್ಲದೆ, ಐಸಿಸಿ ಟೂರ್ನಿಯೊಂದರಲ್ಲಿ 1000 ರನ್ ಪೂರೈಸಿದ ಸಚಿನ್ ತೆಂಡುಲ್ಕರ್ ದಾಖಲೆ ಮುರಿದರು. ಧವನ್ ಈ ಪಂದ್ಯದಲ್ಲಿ 78 ರನ್ ಗಳಿಸಿ ಔಟಾಗಿದ್ದರು.
ಭಾರತ ಮತ್ತು ದ. ಆಫ್ರಿಕಾ ನಾಲ್ಕನೇ ಬಾರಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಎದುರಾಗುತ್ತಿದ್ದು, ನಾಲ್ಕೂ ಬಾರಿಯೂ ಗೆದ್ದ ದಾಖಲೆ ಭಾರತದ್ದು. ದ. ಆಫ್ರಿಕಾ ಉದ್ಘಾಟನಾ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಗೆದ್ದಿದ್ದು ಬಿಟ್ಟರೆ ಇದುವರೆಗೆ ಈ ಟೂರ್ನಿಯಲ್ಲಿ ನಾಕೌಟ್ ಹಂತ ತಲುಪಿಲ್ಲ.
ಭಾರತ ಸೆಮಿಫೈನಲ್ ಗೇರುವುದರೊಂದಿಗೆ ಏಕದಿನ ವಿಶ್ವಕಪ್ ನಾಕೌಟ್ ಹಂತಕ್ಕೆ ತಲುಪಿದ ತಂಡಗಳ ಪೈಕಿ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಗೆ ಲಗ್ಗೆಯಿಟ್ಟ ಏಕೈಕ ತಂಡವಾಗಿ ಹೊರಹೊಮ್ಮಿತು. ಅದರಲ್ಲೂ ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಗೆ ಕಾಲಿಟ್ಟಿರುವ ನಾಲ್ಕು ತಂಡಗಳ ಪೈಕಿ ಮೂರು ಏಷ್ಯಾ ಮೂಲದ ರಾಷ್ಟ್ರಗಳು ಎಂಬುದು ಹೆಗ್ಗಳಿಕೆ.