ಮುಂಬೈ: ರಾಹುಲ್ ದ್ರಾವಿಡ್ ರಿಂದ ತೆರವಾಗಲಿರುವ ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ಎನ್ ಸಿಎ ಅಧ‍್ಯಕ್ಷ, ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಆಗಮನವಾಗುವ ಸಾಧ‍್ಯತೆಯಿದೆ.
ವಿವಿಎಸ್ ಲಕ್ಷ್ಮಣ್ ಇದೀಗ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಹಂಗಾಮಿ ಕೋಚ್ ಆಗಿದ್ದಾರೆ. ಈಗಾಗಲೇ ಕೆಲವು ಸರಣಿಗಳಲ್ಲಿ ದ್ರಾವಿಡ್ ಅನುಪಸ್ಥಿತಿಯಲ್ಲಿ ಲಕ್ಷ್ಮಣ್ ಕೋಚ್ ಆಗಿ ತಂಡಕ್ಕೆ ಮಾರ್ಗದರ್ಶನ ನೀಡಿದ್ದರು. ಅವರ ಮಾರ್ಗದರ್ಶನದಲ್ಲಿ ಭಾರತ ತಂಡಕ್ಕೆ ಯಶಸ್ಸೂ ಸಿಕ್ಕಿತ್ತು.
ಇದೀಗ ರಾಹುಲ್ ದ್ರಾವಿಡ್ ಮುಂದೆಯೂ ಕೋಚ್ ಆಗಿ ಮುಂದುವರಿಯಲು ನಿರಾಸಕ್ತಿ ತೋರಿಸಿದ್ದಾರೆ ಎನ್ನಲಾಗುತ್ತಿದೆ. ಅವರಿಗೆ ಮತ್ತೆ ಕೋಚ್ ಆಗಿ ಮುಂದುವರಿಯುವ ಇರಾದೆ ಇಲ್ಲ. ಹೀಗಾಗಿ ಮತ್ತೊಮ್ಮೆ ಆಯ್ಕೆ ಬಯಸಿ ಅರ್ಜಿ ಹಾಕುವುದು ಅನುಮಾನ. ಈ ನಡುವೆ ವಿವಿಎಸ್ ಲಕ್ಷ್ಮಣ್ ಕೋಚ್ ಹುದ್ದೆಗೇರಲು ಆಸಕ್ತಿ ತೋರಿದ್ದಾರೆ.
ಹೀಗಾಗಿ ಬಿಸಿಸಿಐ ಲಕ್ಷ್ಮಣ್ ಅವರನ್ನೇ ಮುಂದಿನ ಮುಖ್ಯ ಕೋಚ್ ಆಗಿ ನೇಮಕ ಮಾಡುವ ಸಾಧ‍್ಯತೆಯಿದೆ. ಮುಂಬರುವ ದ.ಆಫ್ರಿಕಾ ವಿರುದ್ಧದ ಸರಣಿ ವೇಳೆಗೆ ಟೀಂ ಇಂಡಿಯಾಗೆ ಅಧಿಕೃತವಾಗಿ ಹೊಸ ಕೋಚ್ ನೇಮಕವಾಗಲಿದೆ. ಹೀಗಾಗಿ ಲಕ್ಷ್ಮಣ್ ಕೋಚ್ ಎಂದು ಅಧಿಕೃತವಾಗಿ ಘೋಷಿಸುವುದೊಂದೇ ಬಾಕಿ ಎನ್ನಲಾಗಿದೆ.