ಮುಂಬೈ: ಐಪಿಎಲ್ ನಲ್ಲಿ ಚೀನಾ ಮೂಲದ ಕಂಪನಿಗಳ ಪ್ರಾಯೋಜಕತ್ವದಿಂದ ವಿವೋ ಸಂಸ್ಥೆ ಹಿಂದೆ ಸರಿದ ಬೆನ್ನಲ್ಲೇ ಇದೀಗ ಬಿಸಿಸಿಐಗೆ ಐಪಿಎಲ್ ಗೆ ಹೊಸ ಪ್ರಾಯೋಜಕರನ್ನು ಹುಡುಕುವ ತಲೆನೋವು ಶುರುವಾಗಿದೆ.
ಐದು ವರ್ಷಗಳಿಗೆ 440 ಕೋಟಿ ರೂ.ಗಳಿಗೆ ವಿವೋ ಐಪಿಎಲ್ ಪ್ರಾಯೋಜಕತ್ವದ ಒಪ್ಪಂದ ಮಾಡಿಕೊಂಡಿತ್ತು. ಆದರೆ ಈಗ ಉಭಯ ದೇಶಗಳ ನಡುವೆ ಸಂಬಂಧ ಹಳಸಿದ್ದು, ವಿವೋ ಪ್ರಾಯೋಜಕತ್ವದ ಹಿನ್ನಲೆಯಲ್ಲಿ ಅಭಿಮಾನಿಗಳು ಐಪಿಎಲ್ ನ್ನೇ ಬಹಿಷ್ಕರಿಸಲು ತೀರ್ಮಾನಿಸಿದ್ದರು. ಇದರ ಬೆನ್ನಲ್ಲೇ ಸ್ವತಃ ವಿವೋ ಸಂಸ್ಥೆ ಪ್ರಾಯೋಜಕತ್ವದಿಂದ ಹಿಂದೆ ಸರಿದು ಬಿಸಿಸಿಐ ಭಾರೀ ಟೀಕೆಗೊಳಗಾಗುವುದನ್ನು ತಪ್ಪಿಸಿದೆ.
ಆದರೆ ಇದರ ಜತೆಗೆ ಐಪಿಎಲ್ 13 ಗೆ ಕೊನೆಯ ಕ್ಷಣದಲ್ಲಿ ಹೊಸ ಪ್ರಾಯೋಜಕರನ್ನು ಹುಡುಕುವ ತಲೆನೋವು ತಂದಿಟ್ಟಿದೆ. ಆದರೆ ಜನರ ಬಹಿಷ್ಕಾರ, ಟೀಕೆ ಎದುರಿಸುವುದಕ್ಕಿಂತ ಬಿಸಿಸಿಐಗೆ ಇದುವೇ ಮೇಲು ಅನಿಸಬಹುದು.