ಮುಂಬೈ: ಟೀಂ ಇಂಡಿಯಾ ಟಿ20 ಕ್ರಿಕೆಟ್ ತಂಡದ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ರಾಜೀನಾಮೆ ನೀಡಿದ್ದಾರೆ.
ಮುಂಬರುವ ಟಿ20 ವಿಶ್ವಕಪ್ ಬಳಿಕ ಟಿ20 ತಂಡದ ನಾಯಕತ್ವ ತ್ಯಜಿಸುತ್ತಿರುವುದಾಗಿ ಖುದ್ದಾಗಿ ಕೊಹ್ಲಿ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಕೊಹ್ಲಿ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.
ಕೆಲವು ದಿನಗಳ ಮೊದಲು ಕೊಹ್ಲಿ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿಯಿತ್ತು. ಆದರೆ ಬಿಸಿಸಿಐ ಖಜಾಂಜಿ ಅರುಣ್ ಧಮಾಲ್ ಇದನ್ನು ನಿರಾಕರಿಸಿದ್ದರು. ಆದರೆ ಈಗ ಸ್ವತಃ ಕೊಹ್ಲಿ ಹೇಳಿಕೆ ನೀಡಿದ್ದಾರೆ.
ಟೀಂ ಇಂಡಿಯಾ ಪ್ರತಿನಿಧಿಸುವುದರ ಜೊತೆಗೆ ನಾಯಕನಾಗಿ ತಂಡವನ್ನು ಮುನ್ನಡೆಸಲು ನನಗೆ ಇಷ್ಟು ವರ್ಷ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ಆದರೆ ಕಳೆದ 8-9 ವರ್ಷಗಳಿಂದ ಎಲ್ಲಾ ಮೂರೂ ಮಾದರಿಯ ಆಟದಲ್ಲಿ ಆಡುವ ಒತ್ತಡ ಮತ್ತು 5-6 ವರ್ಷದಿಂದ ನಿರಂತರವಾಗಿ ನಾಯಕತ್ವದ ಜವಾಬ್ಧಾರಿ ವಹಿಸಿದ್ದೇನೆ. ಈಗ ಕೊಂಚ ಜವಾಬ್ಧಾರಿಗಳಿಂದ ಹಗುರವಾಗಲು ತೀರ್ಮಾನಿಸಿದ್ದೇನೆ. ಹೀಗಾಗಿ ಟಿ20 ವಿಶ್ವಕಪ್ ಬಳಿಕ ಟಿ20 ಕ್ರಿಕೆಟ್ ನಾಯಕತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಟೆಸ್ಟ್ ಮತ್ತು ಏಕದಿನ ಪಂದ್ಯಗಳ ಮೇಲೆ ಗಮನಕೇಂದ್ರೀಕರಿಸಲಿದ್ದೇನೆ. ಈ ಬಗ್ಗೆ ಈಗಾಗಲೇ ರೋಹಿತ್ ಶರ್ಮಾ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಅಧ‍್ಯಕ್ಷ ಸೌರವ್ ಗಂಗೂಲಿ, ಕೋಚ್ ರವಿ ಭಾಯಿ ಜೊತೆ ಚರ್ಚೆ ನಡೆಸಿದ್ದೇನೆ. ಟಿ20 ಕ್ರಿಕಟ್ ನಲ್ಲಿ ಕೇವಲ ಬ್ಯಾಟ್ಸ್ ಮನ್ ಆಗಿ ಮುಂದುವರಿಯಲಿದ್ದೇನೆ ಎಂದು ಕೊಹ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.