ಕೋಲ್ಕೊತ್ತಾ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ನಲ್ಲಿ ಇಂದು ದ.ಆಫ್ರಿಕಾ ವಿರುದ್ಧ ಶತಕ ಸಿಡಿಸಿದರೂ ವಿರಾಟ್ ಕೊಹ್ಲಿ ವಿರುದ್ಧ ಕೆಲವು ನೆಟ್ಟಿಗರು ಸ್ವಾರ್ಥಿ ಎಂದು ಆಕ್ರೋಶ ಹೊರಹಾಕಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಗೆ ರೋಹಿತ್-ಗಿಲ್ ಅಬ್ಬರದ ಆರಂಭ ನೀಡಿದರು. ಆದರೆ ರೋಹಿತ್, ಗಿಲ್ ಔಟಾದ ಬಳಿಕ ಭಾರತದ ರನ್ ಅಬ್ಬರಕ್ಕೆ ಕಡಿವಾಣ ಬಿತ್ತು. ಅದರಲ್ಲೂ ವಿರಾಟ್ ಕೊಹ್ಲಿ ಇಂದು ತೀರಾ ನಿಧಾನಗತಿಯ ಇನಿಂಗ್ಸ್ ಆಡಿದರು.
ಅವರು ಇಂದು 101 ರನ್ ಗಳಿಸಲು ಬರೋಬ್ಬರಿ 121 ಎಸೆತ ಬಳಸಿದರು. 40 ರಿಂದ 50 ರನ್ ಗಳಿಸಲು 20 ಎಸೆತ ಬೇಕಾಯಿತು. ಸಾಮಾನ್ಯವಾಗಿ ಕೊಹ್ಲಿ ಇಷ್ಟು ನಿಧಾನಗತಿಯ ಇನಿಂಗ್ಸ್ ಆಡುವುದಿಲ್ಲ. ಹೀಗಾಗಿಯೇ ಶತಕಕ್ಕಾಗಿಯೇ ಕೊಹ್ಲಿ ಇಂದು ನಿಧಾನಗತಿಯ ಇನಿಂಗ್ಸ್ ಆಡಿದರು. ತಂಡದ ಹಿತದೃಷ್ಟಿಯಿಂದ ಆಡಲಿಲ್ಲ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೆ ನೆಟ್ಟಿಗರ ಈ ಆಪಾದನೆಗೆ ಉತ್ತರವೆಂಬಂತೆ ತಮ್ಮ ಇನಿಂಗ್ಸ್ ಬಳಿಕ ಕೊಹ್ಲಿ ನಿಧಾನಗತಿಯ ಆಟಕ್ಕೆ ಕಾರಣವೇನು ಎಂದು ತಿಳಿಸಿದ್ದಾರೆ. ರೋಹಿತ್, ಗಿಲ್ ವಿಕೆಟ್ ಆರಂಭದಲ್ಲೇ ಕಳೆದುಕೊಂಡಾಗ ತಾವು ಇಡೀ ಇನಿಂಗ್ಸ್ ಜವಾಬ್ಧಾರಿ ಹೊತ್ತು ಆಡಬೇಕು, ಜೊತೆಗಾರ ಹೊಡೆತಗಳಿಗೆ ಕೈ ಹಾಕಬೇಕು ಎಂಬುದು ಡ್ರೆಸ್ಸಿಂಗ್ ರೂಂನಿಂದ ಬಂದ ಸಂದೇಶವಾಗಿತ್ತು. ಆ ಯೋಜನೆಗೆ ತಕ್ಕಂತೆ ಆಡಿದೆವು ಎಂದು ಕೊಹ್ಲಿ ಸ್ಪಷ್ಟನೆ ನೀಡಿದ್ದಾರೆ.