ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಐಪಿಎಲ್ ಆಡುವ ವಿರಾಟ್ ಕೊಹ್ಲಿಗೆ ಬೆಂಗಳೂರು ಎರಡನೇ ತವರಿದ್ದಂತೆ. ಇದೀಗ ವಿಶ್ವಕಪ್ ನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯವಾಡಲು ಎಲ್ಲರಿಗಿಂತ ಮೊದಲೇ ಕೊಹ್ಲಿ ಬೆಂಗಳೂರಿಗೆ ಬಂದಿಳಿದಿದ್ದಾರೆ.
ಕೊಹ್ಲಿಯನ್ನು ದತ್ತುಮಗನಂತೆ ಕಾಣುವಂತಹ ಬೆಂಗಳೂರಿಗರ ಬಗ್ಗೆ ಸ್ವತಃ ಅವರಿಗೆ ಎಂತಹ ಭಾವನೆಯಿದೆ? ಅವರು ಬೆಂಗಳೂರನ್ನು ಎಷ್ಟು ಇಷ್ಟಪಡುತ್ತಾರೆ ಎಂಬುದನ್ನು ಸ್ಟಾರ್ ಸ್ಪೋರ್ಟ್ಸ್ ಗೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.
ನಾನು ಆರ್ ಸಿಬಿಗೆ ಸೇರಿದ ಬಳಿಕ ಇಲ್ಲಿನ ಜನ ನನ್ನನ್ನು ಪ್ರೀತಿಸುವ ರೀತಿ, ನನ್ನನ್ನು ಸ್ವೀಕರಿಸಿದ ಬಗೆ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ನಾನು ಇಲ್ಲಿ ಹುಟ್ಟಿದವನಲ್ಲ. ಹಾಗಿದ್ದರೂ ಇಲ್ಲಿನ ಜನ ನನಗೆ ತೋರಿಸಿದ ಪ್ರೀತಿ ಬೆಲೆ ಕಟ್ಟಲಾಗದಂತದ್ದು. ಇದು ನನಗೆ ಎರಡನೇ ಮನೆ ಅಲ್ಲ, ನನ್ನ ಮನೆಯೇ ಆಗಿದೆ. ಇಲ್ಲಿನ ಅಭಿಮಾನಿಗಳ ಅಭಿಮಾನ, ಅವರ ವಿಧೇಯತೆ ಅದಕ್ಕೆ ಬದಲಿಯಾಗಿ ನಾನು ಏನು ಕೊಟ್ಟರೂ ಕಡಿಮೆಯೇ. ಏನೇ ಆದರೂ ಅವರು ನಮ್ಮ ತಂಡದ ಜೊತೆಗೆ ನಿಲ್ಲುವ ವಿಧೇಯತೆಗೆ, ನಮ್ಮ ತಂಡದ ಬಗ್ಗೆ ಅವರಿಗಿರುವ ಕಾಳಜಿಗೆ ಏನು ಹೇಳಿದರೂ ಕಡಿಮೆಯೇ. ಅವರ ಮುಂದೆ ಮತ್ತೆ ಆಡುವುದು ನನಗೆ ವಿಶೇಷ ಕ್ಷಣ ಎಂದಿದ್ದಾರೆ ಕೊಹ್ಲಿ. ಅವರ ಈ ಸಂದರ್ಶನದ ಸಂಪೂರ್ಣ ವಿಡಿಯೋ ನವಂಬರ್ 12 ರಂದು ರಿಲೀಸ್ ಆಗಲಿದೆ.