ಮುಂಬೈ: ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಅತ್ಯುತ್ತಮ ಲಹರಿಯಲ್ಲಿದ್ದ ವಿರಾಟ್ ಕೊಹ್ಲಿ ಇನ್ನೇನು ಶತಕ ಗಳಿಸಿಯೇ ಬಿಡುತ್ತಾರೆ ಎಂದೇ ಎಲ್ಲರ ನಿರೀಕ್ಷೆಯಾಗಿತ್ತು.
ಒಂದು ವೇಳೆ ಇಂದು ಶತಕ ಗಳಿಸಿದ್ದರೆ ಕೊಹ್ಲಿಗೆ ಇದು ಏಕದಿನದಲ್ಲಿ 49 ನೇ ಶತಕವಾಗುತ್ತಿತ್ತು. ವಿಶೇಷವೆಂದರೆ ಸಚಿನ್ ತೆಂಡುಲ್ಕರ್ ಕೂಡಾ ಇಂದು ಮೈದಾನದಲ್ಲಿ ಕೂತು ಪಂದ್ಯ ವೀಕ್ಷಿಸುತ್ತಿದ್ದರು. ಅವರ ಎದುರೇ ಅವರ ದಾಖಲೆಯನ್ನು ಕೊಹ್ಲಿ ಸರಿಗಟ್ಟುತ್ತಿದ್ದರು.
ಆದರೆ 88 ರನ್ ಗಳಿಸಿದ್ದಾಗ ತಪ್ಪಾದ ಹೊಡೆತಕ್ಕೆ ಕೈ ಹಾಕಿ ಮಧುಶಂಕಾಗೆ ವಿಕೆಟ್ ಒಪ್ಪಿಸಿದರು. ತೀವ್ರ ನಿರಾಸೆಯಲ್ಲಿ ಪೆವಿಲಿಯನ್ ನತ್ತ ತೆರಳಿದ ಕೊಹ್ಲಿ ಅಲ್ಲಿಯೂ ತೀರಾ ಬೇಸರದಲ್ಲಿ ಕುಳಿತಿದ್ದು ಕಂಡುಬಂತು. ಈ ವಿಶ್ವಕಪ್ ಟೂರ್ನಿಯಲ್ಲಿ ಇದು ಮೂರನೇ ಬಾರಿ ಕೊಹ್ಲಿ ಶತಕದ ಅಂಚಿನಲ್ಲಿ ವಿಕೆಟ್ ಒಪ್ಪಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ 85, ನ್ಯೂಜಿಲೆಂಡ್ ವಿರುದ್ಧ 95 ಮತ್ತು ಇಂದು 88 ರನ್ ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ. ಸಹಜವಾಗಿಯೇ ಕೊಹ್ಲಿ ಮುಖದಲ್ಲಿ ನಿರಾಸೆ ಎದ್ದು ಕಾಣುತ್ತಿತ್ತು. ವಿಪರ್ಯಾಸವೆಂದರೆ ಕೊಹ್ಲಿ ಜೊತೆಗೆ ಶುಬ್ಮನ್ ಗಿಲ್ ಕೂಡಾ ಇಂದು 90 ರನ್ ಗಳಿಗೆ ಔಟಾಗುವ ಮೂಲಕ ಶತಕ ತಪ್ಪಿಸಿಕೊಂಡರು.