ಗುವಾಹಟಿ: ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಶತಕ ಹಾಗೂ ಹಿಟ್ ಮ್ಯಾನ್ ರೋಹಿತ್ ಶರ್ಮಾ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ 50 ಓವರ್ ಗಳಲ್ಲಿ 373 ರನ್ ಗಳ ಬೃಹತ್ ಮೊತ್ತ ಪೇರಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಶುಬ್ನಂ ಗಿಲ್ ಹಾಗೂ ರೋಹಿತ್ ಶರ್ಮಾ ಶತಕದ ಜೊತೆಯಾಟ ನೀಡಿದರು. ಶುಬ್ನಂ ಗಿಲ್ 70 ರನ್ ಗಳಿಸಿದರೆ ರೋಹಿತ್ ಶರ್ಮಾ ತಮ್ಮ ಎಂದಿನ ಹಿಟ್ ಮ್ಯಾನ್ ಅವತಾರ ತಾಳಿ 67 ಎಸೆತಗಳಿಂದ 83 ರನ್ ಸಿಡಿಸಿದರು. ಇನ್ನೇನು ಶತಕ ಪೂರ್ತಿ ಮಾಡಬಹುದು ಎಂದು ಎಲ್ಲರೂ ಅಂದುಕೊಂಡಿದ್ದಾಗ ದಿಲ್ಶನ್ ಗೆ ವಿಕೆಟ್ ಒಪ್ಪಿಸಿದರು.
ಬಳಿಕ ವಿರಾಟ್ ಕೊಹ್ಲಿಯದ್ದೇ ಆಟ. ಆರಂಭದಲ್ಲಿ ಕೊಂಚ ನಿಧಾನಿಯಾದರೂ ಅರ್ಧಶತಕದ ಬಳಿಕ ಕೊಹ್ಲಿ ಗೇರ್ ಬದಲಾಯಿಸಿದರು. ಮನಮೋಹಕ ಹೊಡೆತಗಳ ಮೂಲಕ ರಂಜಿಸಿದರು. ಈ ನಡುವೆ ಅವರಿಗೆ ಜೀವದಾನವೂ ಸಿಕ್ಕಿತ್ತು. ಅಂತಿಮವಾಗಿ 87 ಎಸೆತಗಳಲ್ಲಿ 113 ರನ್ ಗಳಿಸಿ ಔಟಾದರು. ಇದು ಏಕದಿನಗಳಲ್ಲಿ ಅವರ 45 ನೇ ಮತ್ತು ಲಂಕಾ ವಿರುದ್ಧ 9 ನೇ ಶತಕವಾಗಿತ್ತು. ಈ ಮೂಲಕ ಲಂಕಾ ವಿರುದ್ಧ ಗರಿಷ್ಠ ಶತಕ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಸಚಿನ್ ತೆಂಡುಲ್ಕರ್ ದಾಖಲೆ ಮುರಿದರು.
ಈ ನಡುವೆ ಶ್ರೇಯಸ್ ಅಯ್ಯರ್ 28, ಕೆಎಲ್ ರಾಹುಲ್ 39 ರನ್ ಗಳ ಕೊಡುಗೆ ಮರೆಯುವಂತಿಲ್ಲ. ಆದರೆ ಹಾರ್ದಿಕ್ ಪಾಂಡ್ಯ 14 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಲಂಕಾ ಪರ 3 ವಿಕೆಟ್ ಕಬಳಿಸಿದ ಕಸುನ್ ರಜಿತ ಯಶಸ್ವೀ ಬೌಲರ್ ಎನಿಸಿದರು. ಅಂತಿಮವಾಗಿ ಭಾರತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 373 ರನ್ ಗಳಿಸಿತು.