ಅಹಮ್ಮದಾಬಾದ್: ವಿಜಯ್ ಹಜಾರೆ ಟ್ರೋಫಿಯಲ್ಲಿ ಮಯಾಂಕ್ ಅಗರ್ವಾಲ್, ಸಮರ್ಥ್, ಪಡಿಕ್ಕಲ್ ಅವರ ಸ್ಪೋಟಕ ಬ್ಯಾಟಿಂಗ್ ನಿಂದಾಗಿ ಕರ್ನಾಟಕ ತಂಡ ಜಮ್ಮು ಕಾಶ್ಮೀರ ವಿರುದ್ಧ ಭರ್ಜರಿ 222 ರನ್ ಗಳಿಂದ ಗೆಲುವು ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ 50 ಓವರ್ ಗಳಲ್ಲಿ 402 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿತು. ಅದೂ ಕೇವಲ 2 ವಿಕೆಟ್ ಕಳೆದುಕೊಂಡು! ದೇಶೀಯ ಕ್ರಿಕೆಟ್ ನಲ್ಲಿ ಇದು ಕರ್ನಾಟಕದ ಗರಿಷ್ಠ ಮೊತ್ತವಾಗಿದೆ. ಈ ಮೊತ್ತ ಬೆನ್ನತ್ತಿದ ಜಮ್ಮು 30.4 ಓವರ್ ಗಳಲ್ಲಿ 180 ರನ್ ಗಳಿಗೆ ಆಲೌಟ್ ಆಯಿತು.
ಕರ್ನಾಟಕದ ಪರ ಭರ್ಜರಿ ಶತಕ ಸಿಡಿಸಿದ ನಾಯಕ ಮಯಾಂಕ್ ಅಗರ್ವಾಲ್ 133 ಎಸೆತಗಳಿಂದ 157 ರನ್ ಸಿಡಿಸಿದರು. ಅವರಿಗೆ ತಕ್ಕ ಸಾಥ್ ನೀಡಿದ ಸಮರ್ಥ್ 120 ಎಸೆತಗಳಿಂದ 123 ರನ್ ಗಳಿಸಿದರು. ಆದರೆ ಕೊನೆಯಲ್ಲಿ ಮಿಂಚಿದ್ದು ದೇವದತ್ತ ಪಡಿಕ್ಕಲ್. ಕೇವಲ 35 ಎಸೆತಗಳಿಂದ 5 ಸಿಕ್ಸರ್ ಸಹಿತ ಅಜೇಯ 71 ರನ್ ಚಚ್ಚಿದ ಬ್ಯಾಟಿಗ ತಂಡದ ಮೊತ್ತ 400 ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.
ಈ ಮೊತ್ತ ಬೆನ್ನತ್ತಿದ ಜಮ್ಮು ಪರ ಯದುವೀರ ಸಿಂಗ್ ಚರಕ್ 64, ವಿವ್ರಾಂತ್ ಶರ್ಮ 41, ಶುಭಂ ಖಜುರಿಯಾ 29 ರನ್ ಗಳಿಸಿದರು. ಕರ್ನಾಟಕ ಪರ ಬೌಲಿಂಗ್ ನಲ್ಲಿ ಮಿಂಚಿದ ವಿಜಯಕುಮಾರ್ ವೈಶಾಖ್ 4 ವಿಕೆಟ್ ಕಬಳಿಸಿ ಮಿಂಚಿದರು. ಉಳಿದಂತೆ ಕೆ.ಗೌತಮ್ 2, ಜಗದೀಶ್ ಸುಚಿತ್, ವಿದ್ವತ್ ಕಾವೇರಪ್ಪ, ವಾಸುಕಿ ಕೌಶಿಕ್ ತಲಾ 1 ವಿಕೆಟ್ ತಮ್ಮದಾಗಿಸಿಕೊಂಡರು.