ಪೊಚೆಫ್ ಸ್ಟೂಮ್: ಅಂಡರ್ 19 ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು ಸೋಲಿಸಿ ಚೊಚ್ಚಲ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡ ಬಾಂಗ್ಲಾ ಆಟಗಾರರ ಸಾಧನೆಯನ್ನೇನೋ ಎಲ್ಲರೂ ಕೊಂಡಾಡುತ್ತಿದ್ದಾರೆ. ಆದರೆ ವಿಶ್ವಕಪ್ ಗೆದ್ದ ಬಳಿಕ ಅವರ ವರ್ತನೆ ಇದೀಗ ಎಲ್ಲೆಡೆ ಟೀಕೆಗೆ ಗುರಿಯಾಗಿದೆ.
ವಿಶ್ವಕಪ್ ಗೆದ್ದ ಖುಷಿಯಲ್ಲಿ ಬಾಂಗ್ಲಾ ಆಟಗಾರರು ಮೈದಾನಕ್ಕೆ ನುಗ್ಗಿ ಎಲ್ಲರಿಗೂ ಕೈಕುಲುಕಿ ವಿದಾಯ ಹೇಳುತ್ತಿದ್ದ ಭಾರತೀಯ ಆಟಗಾರರ ಮುಂದೆ ಬಂದು ಅಸಭ್ಯವಾಗಿ ಕುಣಿದು ಕುಹುಕ ಮಾಡಿದ್ದಾರೆ. ಇದರ ಬಗ್ಗೆ ಪಂದ್ಯದ ಬಳಿಕ ಭಾರತೀಯ ನಾಯಕ ಪ್ರಿಯಂ ಗಾರ್ಗ್ ಪ್ರತಿಕ್ರಿಯಿಸಿದ್ದು, ಗೆಲುವು-ಸೋಲು ಎನ್ನುವುದು ಪಂದ್ಯದಲ್ಲಿ ಸಾಮಾನ್ಯ. ಅದನ್ನು ನಾವು ಸಮನಾಗಿ ಸ್ವೀಕರಿಸುತ್ತೇವೆ. ಆದರೆ ಬಾಂಗ್ಲಾ ಆಟಗಾರರ ವರ್ತನೆ ಮಾತ್ರ ‘ಕೊಳಕಾಗಿತ್ತು ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಾಂಗ್ಲಾ ಕ್ರಿಕೆಟ್ ತಂಡದ ನಾಯಕ ಅಕ್ಬರ್ ಅಲಿ ಕ್ಷಮೆ ಯಾಚಿಸಿದ್ದು, ತಮ್ಮ ಹುಡುಗರ ವರ್ತನೆಯನ್ನು ಖಂಡಿಸಿದ್ದಾರೆ.