ಮುಂಬೈ: ಮುಂದಿನ ತಿಂಗಳು ವೆಸ್ಟ್ ಇಂಡೀಸ್ ಮತ್ತು ಅಮೆರಿಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಗೆ ಪಾಕ್ ಮೂಲದ ಭಯೋತ್ಪಾದಕರಿಂದ ದಾಳಿ ಬೆದರಿಕೆ ಬಂದಿದೆ.
ಪ್ರೋ ಇಸ್ಲಾಮಿಕ್ ಸ್ಟೇಟ್ ಉಗ್ರರಿಂದ ವಿಶ್ವಕಪ್ ವೇಳೆ ದಾಳಿ ನಡೆಸುವ ಬೆದರಿಕೆ ಬಂದಿದೆ. ಈ ಹಿನ್ನಲೆಯಲ್ಲಿ ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ ನಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಜೂನ್ 2 ರಿಂದ ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಭಾರತ ಮತ್ತು ಪಾಕಿಸ್ತಾನ ನಡುವೆ ಜೂನ್ 9 ರಂದು ನ್ಯೂಯಾರ್ಕ್ ನಲ್ಲಿ ಪಂದ್ಯ ನಡೆಯಲಿದೆ.
ಭಾರತ-ಪಾಕ್ ಪಂದ್ಯಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುತ್ತಾರೆ. ಇಂತಹ ಸಂದರ್ಭದಲ್ಲೇ ದಾಳಿ ನಡೆಸಲು ಭಯೋತ್ಪಾದಕರು ಹೊಂಚು ಹಾಕಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ನ ಸಿಇಒ ಜಾನಿ ಗ್ರೇವ್ಸ್ ನಾವು ಈ ಬಗ್ಗೆ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಎಂದಿದ್ದಾರೆ.
ಜೂನ್ 1 ರಿಂದ ಜೂನ್ 29 ರವರೆಗೆ ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ ನ ವಿವಿಧ ತಾಣಗಳಲ್ಲಿ ಐಸಿಸಿ ಟಿ20 ವಿಶ್ವಕಪ್ ನಡೆಯಲಿದೆ. ಈ ಬಾರಿ ಒಟ್ಟು 20 ತಂಡಗಳು ನಾಲ್ಕು ಗುಂಪುಗಳಾಗಿ ಕಣಕ್ಕಿಳಿಯುತ್ತಿದೆ. ಜೂನ್ 29 ರಂದು ಬಾರ್ಬಡೋಸ್ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲಿದೆ.