ಚೆನ್ನೈ: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ 317 ರನ್ ಗಳ ಬೃಹತ್ ಅಂತರದಿಂದ ಗೆದ್ದುಕೊಂಡಿದೆ.
ಈ ಮೂಲಕ ನಾಲ್ಕು ಪಂದ್ಯಗಳ ಸರಣಿ 1-1 ರಿಂದ ಸಮಬಲಗೊಂಡಿದೆ. ಕೊನೆಯ ವಿಕೆಟ್ ಗೆ ಇಂಗ್ಲೆಂಡ್ ಬ್ಯಾಟ್ಸ್ ಮನ್ ಮೊಯಿನ್ ಅಲಿ ಹೊಡೆಬಡಿಯ ಆಟವಾಡಿ 18 ಎಸೆತಗಳಿಂದ 43 ರನ್ ಗಳಿಸಿ ಔಟಾದರು. ಒಂದು ವೇಳೆ ಅವರು ಅರ್ಧಶತಕ ಗಳಿಸಿದ್ದರೆ ಟೆಸ್ಟ್ ಪಂದ್ಯದಲ್ಲಿ ವೇಗದ ಅರ್ಧಶತಕ ಗಳಿಸಿದ ದಾಖಲೆ ಮಾಡುತ್ತಿದ್ದರು. ಆದರೆ ಇಂಗ್ಲೆಂಡ್ 164 ರನ್ ಗೆ ಆಲೌಟ್ ಆಯಿತು.
ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು ತವರಿನ ಹೀರೋ ರವಿಚಂದ್ರನ್ ಅಶ್ವಿನ್. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿದ ಅಶ್ವಿನ್ ಪಂದ್ಯಶ್ರೇಷ್ಠರಾದರು. ಮೊದಲ ಇನಿಂಗ್ಸ್ ನಲ್ಲಿ 5 ವಿಕೆಟ್ ಪಡೆದಿದ್ದ ಅಶ್ವಿನ್ ದ್ವಿತೀಯ ಇನಿಂಗ್ಸ್ ನಲ್ಲಿ 3 ವಿಕೆಟ್ ಕಬಳಿಸಿದರು. ದ್ವಿತೀಯ ಇನಿಂಗ್ಸ್ ನಲ್ಲಿ ಅಕ್ಸರ್ ಪಟೇಲ್ 5 ವಿಕೆಟ್ ಪಡೆದರು. ಉಳಿದಂತೆ 2 ವಿಕೆಟ್ ಕುಲದೀಪ್ ಯಾದವ್ ಪಾಲಾಯಿತು.