ಲಂಡನ್: ಭಾರತಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ಇಂತಹ ಪ್ರತಿಷ್ಠೆಯ ಕಣದಲ್ಲಿ ಭಾರತೀಯ ಆಟಗಾರರು ಸಾಂಘಿಕ ಹೋರಾಟ ಮಾಡಿ ದ.ಆಫ್ರಿಕಾವನ್ನು ಕೇವಲ 191 ರನ್ ಗಳಿಗೆ ಆಲೌಟ್ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ.
ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಇಂದಿನ ಪಂದ್ಯದಲ್ಲಿ ಭಾರತದ ಬೌಲಿಂಗ್ ಮತ್ತು ಫೀಲ್ಡಿಂಗ್ ನಲ್ಲಿ ಅತ್ಯದ್ಭುತ ಪ್ರದರ್ಶನ ತೋರಿದ್ದರಿಂದ ಆಫ್ರಿಕನ್ನರು 44.3 ಓವರ್ ಗಳಿಗೆ ಆಲೌಟ್ ಆಯಿತು.
ವಿಶೇಷವೆಂದರೆ ಆಫ್ರಿಕನ್ನರಿಗೆ ಉತ್ತಮ ಆರಂಭ ದೊರಕಿತ್ತು. ಆರಂಭಿಕರಾದ ಕ್ವಿಂಟನ್ ಡಿ ಕಾಕ್ 53 ಮತ್ತು ಹಶೀಮ್ ಆಮ್ಲಾ 35 ರನ್ ಗಳಿಸಿ ಮೊದಲ ವಿಕೆಟ್ ಗೆ 76 ರನ್ ಪೇರಿಸಿದರು. ಆದರೆ ಸ್ಪಿನ್ನರ್ ಗಳು ದಾಳಿಗೆ ಇಳಿದ ಮೇಲೆ ಪಂದ್ಯದ ಮೇಲೆ ಭಾರತ ಸಂಪೂರ್ಣ ಹಿಡಿತ ಸಾಧಿಸಿತು.
ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಆರಂಭಿಕರಿಬ್ಬರನ್ನೂ ಪೆವಿಲಿಯನ್ ಗೆ ಕಳುಹಿಸಿದರು. ನಂತರ ನಾಯಕ ಎಬಿಡಿ ವಿಲಿಯರ್ಸ್ ಧೋನಿ ಕೈಯಲ್ಲಿ ರನೌಟ್ ಆದರೆ ಡಿ ಮಿಲ್ಲರ್ ಕೊಹ್ಲಿಯಿಂದಾಗಿ ರನೌಟ್ ಆಗಿ ಮರಳಿದರು.
ಈ ಎರಡೂ ಕ್ಷಿಪ್ರ ವಿಕೆಟ್ ನಿಂದಾಗಿ ಭಾರತ ಸಂಪೂರ್ಣವಾಗಿ ಮೇಲುಗೈ ಸಾಧಿಸಿತು. ಅಂತಿಮವಾಗಿ ಭುವನೇಶ್ವರ್ ಕುಮಾರ್ ಎರಡು ವಿಕೆಟ್ ಕಬಳಿಸಿದರು. ಒಟ್ಟಾರೆಯಾಗಿ ಮೂವರು ಬ್ಯಾಟ್ಸ್ ಮನ್ ಗಳು ರನೌಟ್ ಆಗಿ ಮರಳಿದ್ದು, ಭಾರತದ ಸುಧಾರಿತ ಫೀಲ್ಡಿಂಗ್ ಗೆ ಸಾಕ್ಷಿಯಾಗಿತ್ತು. ಹಾಗಿದ್ದರೂ, ಪಂದ್ಯವಿನ್ನೂ ಮುಗಿದಿಲ್ಲ! ಆಫ್ರಿಕನ್ನರ ಬೌಲಿಂಗ್ ಪಡೆ ಉತ್ತಮವಾಗಿದೆ. ಹಾಗಾಗಿ ಟೀಂ ಇಂಡಿಯಾ ಗಟ್ಟಿಯಾಗಿ ನಿಂತರೆ ಮಾತ್ರ ಪಂದ್ಯ ಗೆಲ್ಲಲು ಸಾಧ್ಯ.