ಮುಂಬೈ: 2023 ರ ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಟೀಂ ಇಂಡಿಯಾ ಸೋತಿರಬಹುದು. ಆದರೆ ಸೆಮಿಫೈನಲ್ ವರೆಗೆ ಟೀಂ ಇಂಡಿಯಾ ಯಶಸ್ವೀ ಯಾತ್ರೆ ಎಲ್ಲರಿಗೂ ಸ್ಪೂರ್ತಿದಾಯಕ.
ಟೀಂ ಇಂಡಿಯಾ ಯಶಸ್ಸಿಗೆ ಕೋಚ್ ರಾಹುಲ್ ದ್ರಾವಿಡ್ ಕಾರ್ಯವೈಖರಿಯೂ ಕಾರಣ ಎಲ್ಲರೂ ಹೊಗಳುತ್ತಿದ್ದಾರೆ. ಆದರೆ ದ್ರಾವಿಡ್ ಗೆ ಸಹಾಯಕರಾಗಿ ತಂಡದಲ್ಲಿದ್ದ 19 ಸಹಾಯಕ ಸಿಬ್ಬಂದಿ ವರ್ಗದವರ ಹಿನ್ನಲೆ ಕೇಳಿದರೆ ನೀವು ಅಚ್ಚರಿಗೊಳಗಾಗುತ್ತೀರಿ.
ಟೀಂ ಇಂಡಿಯಾ ಆಟಗಾರರಿಗೆ ಸಹಾಯವಾಗಲು ತಂಡದಲ್ಲಿ ಮೆಂಟಲ್ ಕಂಡೀಷನಿಂಗ್ ಕೋಚ್, ಫಿಸಿಯೋಗಳು, ಭದ್ರತಾ ಸಿಬ್ಬಂದಿಗಳು, ಲಾಜಿಸ್ಟಿಕ್ ಮ್ಯಾನೇಜರ್, ಥ್ರೋ ಡೌನ್ ಸ್ಪೆಷಲಿಸ್ಟ್ ಎಲ್ಲರೂ ಇದ್ದರು. ಇವರ ಹಿನ್ನಲೆ ಮಾತ್ರ ವಿಶೇಷವಾಗಿದೆ. ಇವರೆಲ್ಲರೂ ಕೋಚ್ ದ್ರಾವಿಡ್ ಗೆ ಅಂಡರ್ 19 ತಂಡದಲ್ಲಿ ಕೋಚ್ ಆಗಿದ್ದಾಗಲೇ ಜೊತೆಯಾಗಿದ್ದವರು.
ಟೀಂ ಇಂಡಿಯಾ ವಿಶ್ವಕಪ್ ಯಶಸ್ಸಿನಲ್ಲಿ ಇವರೆಲ್ಲರ ಪಾಲೂ ಇದೆ. ಸಹಾಯಕ ಸಿಬ್ಬಂದಿಗಳ ಪೈಕಿ ಫೀಲ್ಡಿಂಗ್ ಕೋಚ್ ಆಗಿದ್ದ ಟಿ. ದಿಲೀಪ್ ಓರ್ವ ಗಣಿತದ ಟ್ಯೂಷನ್ ಟೀಚರ್ ಆಗಿದ್ದವರು! ಮೆಂಟಲ್ ಕಂಡೀಷನಿಂಗ್ ಕೋಚ್ ಆಗಿದ್ದ ಸೋಹಂ ದೇಸಾಯಿ ಮೂಲತಃ ಓರ್ವ ಪರ್ವತಾರೋಹಿ. ವಿಡಿಯೋ ಮತ್ತು ಡಾಟಾ ಅನಲೈಸ್ ಮಾಡುತ್ತಿದ್ದ ಹರಿಪ್ರಸಾದ್ ಮೋಹನ್ ಇಂಜಿನಿಯರ್ ಆಗಿದ್ದವರು.
ಇನ್ನು, ಕ್ರಿಕೆಟಿಗರಿಗೆ ಮನರಂಜನೆ ಒದಗಿಸಲು ಡಿಜೆಯಾಗಿ ಮತ್ತು ಕ್ರಿಕೆಟಿಗರ ಕುಟುಂಬ, ಯೂನಿಫಾರ್ಮ್, ಮ್ಯಾಚ್ ಟಿಕೆಟ್ ಇತ್ಯಾದಿ ವ್ಯವಸ್ಥೆ ನೋಡಿಕೊಳ್ಳುತ್ತಿದ್ದವರು ರಿಶಿಕೇಶ್ ಉಪಾಧ್ಯಾಯ. ಇವರು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರ ಬಾಲ್ಯದ ಗೆಳೆಯ. ಇವರಲ್ಲದೆ ಆಟಗಾರರ ಫಿಟ್ನೆಸ್, ತಂಡದ ಸೋಷಿಯಲ್ ಮೀಡಿಯಾ ಕಂಟೆಂಟ್ ನೀಡಲು, ಅಗತ್ಯ ಔಷಧ ನೀಡಲೆಂದೇ ಪ್ರತ್ಯೇಕ ಸ್ಟಾಫ್ ಗಳಿದ್ದರು.