ಲಂಡನ್: ವಿಶ್ವಕಪ್ ಕ್ರಿಕೆಟ್ 2019 ರ ಮೊದಲ ಪಂದ್ಯವನ್ನು ಟೀಂ ಇಂಡಿಯಾ ಜೂನ್ 6 ರಂದು ದ.ಆಫ್ರಿಕಾ ವಿರುದ್ಧ ಆಡಲಿದ್ದು, ಅದಕ್ಕೂ ಮೊದಲು ನಡೆಯಬೇಕಿರುವ ಸುದ್ದಿಗೋಷ್ಠಿಗೆ ಮಾಧ್ಯಮಗಳಿಂದ ಬಹಿಷ್ಕಾರದ ಬಿಸಿ ಅನುಭವಿಸಿದೆ.
ಟೀಂ ಇಂಡಿಯಾ ವಿರುದ್ಧ ಮಾಧ್ಯಮಗಳಿಗೆ ಸಿಟ್ಟು ಬರಲು ಕಾರಣವೇನು ಗೊತ್ತಾ? ಸಾಮಾನ್ಯವಾಗಿ ಇಂತಹ ಮಹತ್ವದ ಟೂರ್ನಿಗೆ ಮೊದಲು ಸುದ್ದಿಗೋಷ್ಠಿಗೆ ಕೋಚ್ ರವಿಶಾಸ್ತ್ರಿ ಅಥವಾ ಸಹಾಯಕ ಸಿಬ್ಬಂದಿಗಳು ಇಲ್ಲವೇ ತಂಡದ ಹಿರಿಯ ಕ್ರಿಕೆಟಿಗರನ್ನು ಕಳುಹಿಸಬೇಕಿತ್ತು.
ಆದರೆ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಮಾಧ್ಯಮಗಳ ಎದುರು ಮಾತನಾಡಲು ನೆಟ್ ಬೌಲರ್ ಗಳನ್ನು ಕಳುಹಿಸಿ ಅವಮಾನ ಮಾಡಿದೆ. ಇದರಿಂದ ಸಿಟ್ಟಿಗೆದ್ದ ಮಾಧ್ಯಮಗಳು ಸುದ್ದಿಗೋಷ್ಠಿಯನ್ನೇ ಬಹಿಷ್ಕರಿಸಿವೆ.
ಈ ಬಗ್ಗೆ ಟೀಂ ಇಂಡಿಯಾ ಮೀಡಿಯಾ ಮ್ಯಾನೇಜರ್ ಮತ್ತು ಮಾಧ್ಯಮ ಪ್ರತಿನಿಧಿಗಳ ನಡುವೆ ಕಿತ್ತಾಟ ನಡೆದಿದೆ. ನೆಟ್ ಬೌಲರ್ ಗಳಾಗಿ ತಂಡದೊಂದಿಗೆ ಬಂದಿರುವ ದೀಪಕ್ ಚಹರ್ ಮತ್ತು ಅವೇಶ್ ತಂಡದ ಬಗ್ಗೆ ಏನು ಹೇಳಲು ಸಾಧ್ಯ? ಹಿರಿಯ ಆಟಗಾರರನ್ನು ಕರೆಸಿ ಎಂದಿದ್ದಕ್ಕೆ ಮ್ಯಾನೇಜರ್ ಇನ್ನೂ ಭಾರತ ಒಂದೇ ಒಂದು ಪಂದ್ಯವಾಡಿಲ್ಲ. ಹೀಗಾಗಿ ಸಾಧ್ಯವಿಲ್ಲ ಎಂದು ಅಸಮಂಜಸ ಉತ್ತರ ನೀಡಿದ್ದು ಮಾಧ್ಯಮಗಳ ಆಕ್ರೋಶಕ್ಕೆ ಕಾರಣವಾಗಿದೆ.