ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆದ ಮೊದಲ ಟಿ20 ಪಂದ್ಯದಲ್ಲಿಯೇ ಪ್ರವಾಸಿ ಬಾಂಗ್ಲಾ ತಂಡ ಅತಿಥೇಯ ತಂಡಕ್ಕೆ ಮರೆಯಲಾರದ ಆಘಾತ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಆರಂಭದಲ್ಲೇ ನಾಯಕ ರೋಹಿತ್ ಶರ್ಮಾರನ್ನು (9ರನ್) ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಶಿಖರ್ ದವನ್ 41 ರನ್ ಗಳಿಸಿ ರನೌಟ್ ಆದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಭಾರತಕ್ಕೆ ನಿರೀಕ್ಷಿತ ರನ್ ಬರಲಿಲ್ಲ. ಕೆಎಲ್ ರಾಹುಲ್ ಕೇವಲ 15, ರಿಷಬ್ ಪಂತ್ 27 ಮತ್ತು ಶ್ರೇಯಸ್ ಅಯ್ಯರ್ 22 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಇವರಿಂದ ಹೊಡೆಬಡಿಯ ಆಟ ಬರದೇ ಭಾರತ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆಎ 148 ರನ್ ಗಳಿಸಲಷ್ಟೇ ಶಕ್ತವಾಯಿತು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾದ ಆರಂಭವೂ ಉತ್ತಮವಾಗಿರಲಿಲ್ಲ. ಲಿಟನ್ ದಾಸ್ 7 ರನ್ ಗಳಿಸಿ ಔಟಾದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಮುಷ್ಫಿಕರ್ ರೆಹಮಾನ್ 43 ಎಸೆತಗಳಲ್ಲಿ ಅಜೇಯ 60 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಇವರಿಗೆ ಸೌಮ್ಯ ಸರ್ಕಾರ್ 39 ರನ್ ಗಳಿಸಿ ಉತ್ತಮ ಸಾಥ್ ನೀಡಿದರು. ಇದರಿಂದಾಗಿ ಬಾಂಗ್ಲಾ ಇನ್ನೂ ಮೂರು ಎಸೆತಗಳು ಬಾಕಿ ಇರುವಂತೆ 3 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿ 7 ವಿಕೆಟ್ ಗಳ ಭರ್ಜರಿ ಗೆಲುವು ಕಂಡಿತು.
ಇದು ಟಿ 20 ಪಂದ್ಯಗಳಲ್ಲಿ ಭಾರತಕ್ಕೆ ಬಾಂಗ್ಲಾ ವಿರುದ್ಧ ಸಿಗುತ್ತಿರುವ ಮೊದಲ ಸೋಲಾಗಿದೆ. ಅದೂ ಸರಣಿಯ ಆರಂಭದ ಪಂದ್ಯದಲ್ಲೇ ಈ ರೀತಿಯ ಸೋಲು ಕಂಡಿರುವುದು ಆಘಾತಕಾರಿಯಾಗಿದೆ.