ರಾಂಚಿ: ಟೀಂ ಇಂಡಿಯಾದ ಸ್ಪಿನ್ನರ್ ರವೀಂದ್ರ ಜಡೇಜಾಗೆ ಭೋಜನ ವಿರಾಮಕ್ಕೆ ಅದೇನು ಅರ್ಜೆಂಟೋ.. ಅಷ್ಟು ಹೊತ್ತು, ಬಸವಳಿದವರಂತೆ ಆಡುತ್ತಿದ್ದ ಬೌಲರ್ ಗಳು ಇದ್ದಕ್ಕಿದ್ದಂತೆ ಎಚ್ಚೆತ್ತರು. ಆಸೀಸ್ ಆಟಗಾರರನ್ನು ಒಬ್ಬರಾದ ಮೇಲೊಬ್ಬರಂತೆ ಪೆವಿಲಿಯನ್ ಗೆ ಕಳುಹಿಸುತ್ತಿದ್ದರು.
ತೃತೀಯ ಟೆಸ್ಟ್ ಪಂದ್ಯದ ದ್ವಿತೀಯ ದಿನದ ಆರಂಭ ನೋಡಿದಾಗ ಟೀಂ ಇಂಡಿಯಾಗೆ ಇಂದೂ ನಿರಾಸೆಯೇ ಗತಿ ಎಂದೇ ಅಂದುಕೊಂಡಿದ್ದರು. ಆದರೆ ಭೋಜನ ವಿರಾಮಕ್ಕೆ ಕೆಲವೇ ಕ್ಷಣಗಳ ಮೊದಲು ದಾಳಿಗಿಳಿದ ಜಡೇಜಾ, ಛಕ್ಕನೆ 2 ವಿಕೆಟ್ ಕಿತ್ತು ಭೋಜನ ವಿರಾಮಕ್ಕೆ ಮೊದಲೊಂದು ಭೂರಿ ಭೋಜನ ಕೊಟ್ಟರು.
ಆಸ್ಟ್ರೇಲಿಯಾ ಭೋಜನ ವಿರಾಮದ ವೇಳೆಗೆ 7 ವಿಕೆಟ್ ಕಳೆದುಕೊಂಡು 401 ರನ್ ಗಳಿಸಿದೆ. ಸ್ಟೀವ್ ಸ್ಮಿತ್ ದೊಡ್ಡ ಮೊತ್ತ ಕಲೆ ಹಾಕಲು ಟೊಂಕ ಕಟ್ಟಿ ನಿಂತವರಂತೆ ಆಡುತ್ತಿದ್ದಾರೆ. ಗಟ್ಟಿ ನಿಂತು ಆಡುತ್ತಿರುವ ಸ್ಮಿತ್ (153) ದ್ವಿತಶತಕದ ಹಾದಿಯಲ್ಲಿದ್ದಾರೆ.
ನಾಯಕ ಕೊಹ್ಲಿ ಇಂದೂ ಕೂಡಾ ಮೈದಾನಕ್ಕೆ ಇಳಿಯಲಿಲ್ಲ. ಬಹುಶಃ ಬ್ಯಾಟಿಂಗ್ ಗೆ ಇಳಿಯಲು ರಿಲ್ಯಾಕ್ಸ್ ಮಾಡುತ್ತಿರಬೇಕು. ಇವತ್ತು ಮೊದಲ ಅವಧಿಯಲ್ಲಿ ಬಿದ್ದ ವಿಕೆಟ್ ಮೂರು. ಮೊದಲ ಎಸೆತಕ್ಕೇ ಬ್ಯಾಟ್ ಮುರಿದುಕೊಂಡ ಮ್ಯಾಕ್ಸ್ ವೆಲ್ ಕೊನೆಗೊಂದು ಶತಕ ಗಳಿಸಿದ ತಕ್ಷಣ ಜಡೇಜಾಗೆ ವಿಕೆಟ್ ಒಪ್ಪಿಸಿದರು. ಇಂದು ಬಿದ್ದ ಎಲ್ಲಾ ವಿಕೆಟ್ ಗಳು ಜಡೇಜಾ ಪಾಲಾಯಿತು.
ಅದು ಬಿಟ್ಟರೆ, ನಾಯಕ ಸ್ಮಿತ್ ಆಷಾಢದಲ್ಲಿ ಸುರಿವ ಮಳೆಯಂತೆ, ಒಂದೇ ರಾಗದಲ್ಲಿ ರನ್ ಕಡಿದು ಕಟ್ಟೆ ಹಾಕುತ್ತಿದ್ದರು. ಸದ್ಯಕ್ಕೆ ಸ್ಮಿತ್ ಜತೆಗೆ ಸ್ಟೀವ್ ಒಕೀಫೆ ಕ್ರೀಸ್ ನಲ್ಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ