ಮುಂಬೈ: ಶ್ರೀಲಂಕಾ ವಿರುದ್ಧದ ಟಿ20 ಸರಣಿ ಮತ್ತು ಏಕದಿನ ಸರಣಿಗೆ ಇಂದು ಟೀಂ ಇಂಡಿಯಾ ಘೋಷಣೆಯಾಗುವ ನಿರೀಕ್ಷೆಯಿದೆ. ಆಯ್ಕೆ ಪ್ರಕ್ರಿಯೆಗೂ ಮುನ್ನ ನೂತನ ಕೋಚ್ ಗೌತಮ್ ಗಂಭೀರ್ ಬಿಸಿಸಿಐಗೆ ತಮ್ಮ ಸ್ಪಷ್ಟ ಸಂದೇಶ ನೀಡಿದ್ದಾರೆ ಎನ್ನಲಾಗಿದೆ.
ಈ ಬಾರಿ ಟೀಂ ಇಂಡಿಯಾ ಘೋಷಣೆ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಯಾಕೆಂದರೆ ತಂಡದ ಜೊತೆಗೆ ಟಿ20 ಫಾರ್ಮ್ಯಾಟ್ ಗೆ ಹೊಸ ನಾಯಕನ ಘೋಷಣೆಯೂ ನಡೆಯಲಿದೆ. ಮೊದಲು ಟಿ20 ನಾಯಕತ್ವಕ್ಕೆ ಹಾರ್ದಿಕ್ ಪಾಂಡ್ಯ ಹೆಸರು ಕೇಳಿಬಂದಿತ್ತು. ಆದರೆ ಈಗ ಸೂರ್ಯಕುಮಾರ್ ಯಾದವ್ ಹೆಸರು ಬಲವಾಗಿ ಕೇಳಿಬರುತ್ತಿದೆ. ಹೀಗಾಗಿ ಈಗ ಘೋಷಣೆಯೊಂದೇ ಬಾಕಿ ಎನ್ನಲಾಗಿದೆ.
ಗೌತಮ್ ಗಂಭೀರ್ ಗೆ ಇದು ಕೋಚ್ ಆಗಿ ಮೊದಲ ಸರಣಿ. ಟೀಂ ಇಂಡಿಯಾ ಆಯ್ಕೆ ವಿಚಾರದಲ್ಲಿ ಆಯ್ಕೆ ಸಮಿತಿ ಜೊತೆ ಗಂಭೀರ್ ಈಗಾಗಲೇ ಚರ್ಚೆ ನಡೆಸಿದ್ದಾರೆ. ಜೊತೆಗೆ ಆಯ್ಕೆ ವಿಚಾರದಲ್ಲಿ ತಾವು ತಲೆ ಹಾಕಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಜೊತೆಗೆ ನಡೆಸಿದ ಸಂಭಾಷಣೆಯಲ್ಲೂ ಸ್ಪಷ್ಟಪಡಿಸಿದ್ದಾರಂತೆ. ಆದರೆ ತಮ್ಮ ಕನಸಿನ ತಂಡ ಹೇಗಿರಬೇಕು ಎಂಬ ವಿಚಾರವನ್ನು ಹಂಚಿಕೊಂಡಿದ್ದಾರೆ.