ಅಹಮ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ 10 ವಿಕೆಟ್ ಗಳಿಂದ ಗೆದ್ದುಕೊಂಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಪಂದ್ಯ ಎರಡೇ ದಿನದೊಳಗೆ ಮುಗಿದೇ ಹೋಗಿದೆ.
ಸಂಪೂರ್ಣವಾಗಿ ಬೌಲರ್ ಗಳಿಗೆ ಅದರಲ್ಲೂ ಸ್ಪಿನ್ನರ್ ಗಳಿಗೆ ಸಹಕರಿಸುತ್ತಿದ್ದ ಪಿಚ್ ನಲ್ಲಿ ಹೆಚ್ಚು ಲಾಭ ಪಡೆದಿದ್ದು ರವಿಚಂದ್ರನ್ ಅಶ್ವಿನ್ ಮತ್ತು ಅಕ್ಸರ್ ಪಟೇಲ್. ಇಂಗ್ಲೆಂಡ್ ನ್ನು ಕಟ್ಟಿ ಹಾಕಲು ಭಾರತಕ್ಕೆ ಇವರಿಬ್ಬರೇ ಸಾಕಾಯ್ತು. ಇಡೀ ಪಂದ್ಯದಲ್ಲೇ ಇವರಿಬ್ಬರದ್ದೇ ಶೋ ಎಂದರೂ ತಪ್ಪಾಗಲಾರದು.
ಮೊದಲ ಇನಿಂಗ್ಸ್ ನಲ್ಲಿ 6 ವಿಕೆಟ್ ಕಬಳಿಸಿದ್ದ ಸ್ಥಳೀಯ ಹುಡುಗ ಅಕ್ಸರ್ ಪಟೇಲ್ ದ್ವಿತೀಯ ಇನಿಂಗ್ಸ್ ನಲ್ಲಿ ಮತ್ತೆ 5 ವಿಕೆಟ್ ಗಳ ಗೊಂಚಲು ಪಡೆದರು. ರವಿಚಂದ್ರನ್ ಅಶ್ವಿನ್ ಎರಡೂ ಇನಿಂಗ್ಸ್ ಗಳಿಂದ ತಲಾ 9 ವಿಕೆಟ್ ಕಬಳಿಸಿದರು. 100 ನೇ ಟೆಸ್ಟ್ ಪಂದ್ಯವಾಡುತ್ತಿರುವ ಇಶಾಂತ್ ಶರ್ಮಾಗೆ ದ್ವಿತೀಯ ಇನಿಂಗ್ಸ್ ನಲ್ಲಿ ಒಂದೇ ಒಂದು ಓವರ್ ಎಸೆಯುವ ಭಾಗ್ಯವಿರಲಿಲ್ಲ. ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಕತೆಯೂ ಅಷ್ಟೇ. ಮೊದಲ ಇನಿಂಗ್ಸ್ ನಲ್ಲಿ 112 ಕ್ಕೆ ಆಲೌಟ್ ಆಗಿದ್ದ ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್ ನಲ್ಲಿ 81 ರನ್ ಗಳಿಗೆ ದಿಂಡುರುಳಿತು. ಭಾರತ ಮೊದಲ ಇನಿಂಗ್ಸ್ ನಲ್ಲಿ 145 ಕ್ಕೆ ಆಲೌಟ್ ಆಗಿತ್ತು. ಇದರಿಂದಾಗಿ 33 ರನ್ ಗಳ ಮುನ್ನಡೆಯನ್ನೂ ಪಡೆಯಿತು. ಹೀಗಾಗಿ ದ್ವಿತೀಯ ಇನಿಂಗ್ಸ್ ನಲ್ಲಿ 49 ರನ್ ಗಳ ಗೆಲುವಿನ ಗುರಿ ಪಡೆಯಿತು. ಇದನ್ನು ರೋಹಿತ್ ಶರ್ಮಾ ಅಜೇಯ 25 ಮತ್ತು ಶಬ್ನಂ ಗಿಲ್ 15 ರನ್ ಗಳಿಸುವ ಮೂಲಕ ಪೂರೈಸಿದರು. ನಿನ್ನೆ ಒಂದೇ ದಿನಕ್ಕೆ 17 ವಿಕೆಟ್ ಉರುಳಿದ್ದು ವಿಶೇಷವಾಗಿತ್ತು.