ಅಹಮ್ಮದಾಬಾದ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರನೇ ಏಕದಿನ ಪಂದ್ಯವನ್ನು ಟೀಂ ಇಂಡಿಯಾ 96 ರನ್ ಗಳಿಂದ ಭರ್ಜರಿಯಾಗಿ ಗೆಲ್ಲುವುದರೊಂದಿಗೆ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದೆ.
ಇದರೊಂದಿಗೆ ನಾಯಕ ರೋಹಿತ್ ಶರ್ಮಾ ದಾಖಲೆಯನ್ನೇ ಮಾಡಿದ್ದಾರೆ. ರೋಹಿತ್ ಶರ್ಮಾ ಇದುವರೆಗೆ 13 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದು, ಈ ಪೈಕಿ 11 ರಲ್ಲಿ ಗೆಲುವು ಸಾಧಿಸಿ ಕೊಹ್ಲಿಯ 10 ಗೆಲುವಿನ ದಾಖಲೆಯನ್ನು ಮುರಿದಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್ ಗಳಲ್ಲಿ 265 ರನ್ ಗಳಿಗೆ ಆಲೌಟ್ ಆಗಿತ್ತು. ಈ ಮೊತ್ತ ಬೆನ್ನತ್ತಿದ ವಿಂಡೀಸ್ ಮತ್ತೆ ಬ್ಯಾಟಿಂಗ್ ನಲ್ಲಿ ವೈಫಲ್ಯ ಅನುಭವಿಸಿತು. ನಾಯಕ ನಿಕಲಸ್ ಪೂರನ್ 34, ಒಡಿಯನ್ ಸ್ಮಿತ್ 36 ಮತ್ತು ಜೊಸೆಫ್ 29 ರನ್ ಗಳಿಸಿದರು. ಭಾರತದ ಪರ ಪ್ರಸಿದ್ಧ ಕೃಷ್ಣ, ಮೊಹಮ್ಮದ್ ಸಿರಾಜ್ ತಲಾ 3, ಕುಲದೀಪ್ ಯಾದವ್, ದೀಪಕ್ ಚಹರ್ ತಲಾ 2 ವಿಕೆಟ್ ಕಬಳಿಸಿ ಮಿಂಚಿದರು. ಇದರೊಂದಿಗೆ ವಿಂಡೀಸ್ 37.1 ಓವರ್ ಗಳಲ್ಲಿ 169 ರನ್ ಗಳಿಗೆ ಆಲೌಟ್ ಆಯಿತು.
80 ರನ್ ಗಳಿಸಿದ ಶ್ರೇಯಸ್ ಐಯರ್ ಪಂದ್ಯ ಶ್ರೇಷ್ಠರಾದರೆ, ಈ ಸರಣಿಯುದ್ದಕ್ಕೂ ಬೌಲಿಂಗ್ ನಲ್ಲಿ ಮಿಂಚಿದ ಕನ್ನಡಿಗ ಪ್ರಸಿದ್ಧ ಕೃಷ್ಣ ಸರಣಿ ಶ್ರೇಷ್ಠರಾದರು.