Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಚಾಂಪಿಯನ್ಸ್ ಟ್ರೋಫಿಯಲ್ಲಿ ಯಾವತ್ತೂ ಟೀಂ ಇಂಡಿಯಾ ಕಿಂಗ್!

ಚಾಂಪಿಯನ್ಸ್ ಟ್ರೋಫಿಯಲ್ಲಿ ಯಾವತ್ತೂ ಟೀಂ ಇಂಡಿಯಾ ಕಿಂಗ್!

ಕೃಷ್ಣವೇಣಿ ಕೆ

ಲಂಡನ್ , ಗುರುವಾರ, 1 ಜೂನ್ 2017 (10:29 IST)
ಲಂಡನ್: ವಿಶ್ವಕಪ್ ನಲ್ಲಿ ಭಾರತಕ್ಕೆ ಅಷ್ಟೊಂದು ಯಶಸ್ಸು ಸಿಕ್ಕಿದೆಯೋ ಇಲ್ಲವೋ.. ಆದರೆ ಮಿನಿ ವಿಶ್ವಕಪ್ ಎಂದೇ ಪರಿಗಣಿಸಲ್ಪಡುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಯಾವತ್ತಿಗೂ ಭಾರತವೇ ಸುಲ್ತಾನನಾಗಿ ಮೆರೆದಿರುವುದು.

 
ಇದುವರೆಗೆ ಭಾರತ 2 ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಅದರಲ್ಲಿ ಒಮ್ಮೆ ಶ್ರಿಲಂಕಾ ಜತೆ ಜಂಟಿ ವಿಜೇತರಾಗಿತ್ತು. 2002 ರ ಆ ಟೂರ್ನಿಯಲ್ಲಿ ಮಳೆಯೊಂದು ಅಡ್ಡಿಯಾಗದಿದ್ದರೆ, ಸನತ್ ಜಯಸೂರ್ಯ ಪಡೆಗೆ ಸೌರವ್ ಗಂಗೂಲಿ ನೇತೃತ್ವದ ಟೀಂ ಇಂಡಿಯಾ ಮಣ್ಣು ಮುಕ್ಕಿಸುತ್ತಿತ್ತು.

ಅದೊಂದು ಅವಿಸ್ಮರಣೀಯ ಟೂರ್ನಿ. ಭಾರತ ಸೀಮಿತ ಓವರ್ ಗಳಲ್ಲಿ ಹೊಸ ಶಕೆ ಆರಂಭಿಸಿದ್ದು ಅದೇ ಟೂರ್ನಿಯಿಂದ. ಸೌರವ್ ಗಂಗೂಲಿ ನಾಯಕನಾಗಿ ವಿಶ್ವಕ್ಕೇ ಭಾರತ ತಂಡದ ಬಗ್ಗೆ ಜಾಗತಿಕ ಕ್ರಿಕೆಟ್ ಗೇ ಹೆದರಿಕೆ ಹುಟ್ಟಿಸಿದ್ದು ಅದೇ ಟೂರ್ನಿಯಿಂದ.

ಭಾರತ ತಂಡಕ್ಕೆ ಯುವರಾಜ್, ಮೊಹಮ್ಮದ್ ಕೈಫ್, ಜಹೀರ್ ಖಾನ್, ವೀರೇಂದ್ರ ಸೆಹ್ವಾಗ್ ರಂತಹ ಪ್ರತಿಭಾವಂತರನ್ನು ಒದಗಿಸಿಕೊಟ್ಟ ಟೂರ್ನಿಯದು. ವಿಶೇಷವೆಂದರೆ ಆಗ ತಂಡದಲ್ಲಿದ್ದ ಯುವರಾಜ್ ಈ ಟೂರ್ನಿಯಲ್ಲೂ ಆಡುತ್ತಿದ್ದಾರೆ. ಅಂದು ಯುವ ಆಟಗಾರನಾಗಿ ಜಿಂಬಾಬ್ವೆ ವಿರುದ್ಧ ಗೆಲುವು ಕೊಡಿಸಿ ಭಾರತವನ್ನು ಟೂರ್ನಿಯಲ್ಲಿ ಜೀವಂತವಾಗಿರಿಸಿದ್ದ ಯುವಿ ಇಂದು ಹಿರಿಯ ಆಟಗಾರನಾಗಿ ತಂಡದ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬುತ್ತಿದ್ದಾರೆ.

ಇದುವರೆಗೆ ಭಾರತ 21 ಪಂದ್ಯಗಳನ್ನು ಈ ಟೂರ್ನಿಯಲ್ಲಿ ಆಡಿದೆ. ಅದರಲ್ಲಿ 15 ಜಯ, 6 ಸೋಲು ಕಂಡಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಅತೀ ಹೆಚ್ಚು ಗೆಲುವು ದಾಖಲಿಸಿದ ತಂಡವೆಂಬ ಹೆಗ್ಗಳಿಕೆ ಭಾರತ ತಂಡದ್ದಾಗಿದೆ.

2006 ರಲ್ಲಿ ಭಾರತದಲ್ಲೇ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಫೈನಲ್ ವರೆಗೂ ತಲುಪಿ ಸೋಲನುಭವಿಸಿತ್ತು. ನಂತರ ಎರಡನೇ ಬಾರಿ ಚಾಂಪಿಯನ್ ಆಗಿದ್ದು 2013 ರಲ್ಲಿ ಇಂಗ್ಲೆಂಡ್ ನಲ್ಲಿ.

ಮಳೆಯಿಂದಾಗಿ 20 ಓವರ್ ಗಳಿಗೆ ಓವರ್ ಕಡಿತಗೊಳಿಸಲಾಗಿತ್ತು. ಭಾರತ ಮೊದಲು ಬ್ಯಾಟ್ ಮಾಡಿ ಕೇವಲ 129 ರನ್ ಗಳಿಸಿತ್ತು. ಆದರೂ ಎದುರಾಳಿಗಳನ್ನು ಕೊನೆಯ ಓವರ್ ಥ್ರಿಲ್ಲರ್ ನಲ್ಲಿ 124 ರನ್ ಗಳಿಗೆ ಕಟ್ಟಿ ಹಾಕುವ ಮೂಲಕ 5 ರನ್ ಗಳ ರೋಮಾಂಚಕಾರಿ ಗೆಲುವು ದಾಖಲಿಸಿತು.

ಅದರ ನಂತರ ಟೂರ್ನಿ ನಡೆಯುತ್ತಿರುವುದು ಇದೇ ಮೊದಲ ಬಾರಿ. ಈ ಬಾರಿಯೂ ಭಾರತಕ್ಕೆ ಗೆಲ್ಲುವ ಎಲ್ಲಾ ಅವಕಾಶಗಳಿವೆ. ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ದುರ್ಬಲ ತಂಡಗಳೆನಿಸಿಕೊಂಡಿವೆ.

ಉಳಿದಂತೆ ದ. ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಭಾರತಕ್ಕೆ ಪ್ರಬಲ ಪೈಪೋಟಿ ನೀಡಬಲ್ಲವು. ಮೊದಲ ಚಾಂಪಿಯನ್ಸ್ ಟ್ರೋಫಿ ಗೆದ್ದ ಆಫ್ರಿಕನ್ನರು ಮತ್ತೊಮ್ಮೆ ಆ ಸಾಧನೆ ಮಾಡಲು ಉತ್ಸುಕರಾಗಿದ್ದಾರೆ. ಆಫ್ರಿಕಾದ ಹಶೀಮ್ ಆಮ್ಲಾ, ಎಬಿಡಿ ವಿಲಿಯರ್ಸ್ ಸದಾ ಭಾರತವನ್ನು ಕಾಡುವ ಆಟಗಾರರು.

ಉಳಿದಂತೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಭಾರತ ಗ್ರೂಪ್ ಹಂತದಲ್ಲಿ ಆಡಬೇಕಿಲ್ಲ. ನಾಕೌಟ್ ಹಂತಕ್ಕೆ ಬಂದರೆ, ಭಾರತ ಪ್ರಬಲ ಪೈಪೋಟಿಯಿದೆ. ಆದರೆ ಅವರನ್ನು ಎದುರಿಸಲು ಭಾರತದ ಬೌಲರ್ ಗಳೂ ಸಜ್ಜಾಗಿದ್ದಾರೆ. ಆದರೆ ಬ್ಯಾಟ್ಸ್ ಮನ್ ಗಳು ಖ್ಯಾತಿಗೆ ತಕ್ಕ ಆಟವಾಡಬೇಕಿದೆ. ಹಾಗಿದ್ದರೆ ಮಾತ್ರ ಚಾಂಪಿಯನ್ ಪಟ್ಟ ಜಾರದಂತೆ ಕಾಪಾಡಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದ ಮಿನಿ ವಿಶ್ವಕಪ್ ಕ್ರಿಕೆಟ್: ಏನೆಲ್ಲಾ ಸ್ಪೆಷಲ್?