ದುಬೈ: ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ನಿನ್ನೆ ನಡೆದ ಪಂದ್ಯದಲ್ಲಿ ಗೆದ್ದಿದ್ದು ಕ್ರಿಕೆಟ್! ಕೊನೆಯವರೆಗೂ ಉಸಿರುಬಿಗಿಹಿಡಿವಂತೆ ಮಾಡಿದ ಈ ಪಂದ್ಯದಲ್ಲಿ ಯಾರಿಗೂ ಸೋಲಿಲ್ಲ, ಗೆಲುವೂ ಇಲ್ಲ.
ಪಂದ್ಯ ಟೈ ಆಗಿದ್ದನ್ನು ನೋಡಿ ಭಾರತೀಯ ಕ್ರಿಕೆಟಿಗರಾದ ಶಿಖರ್ ಧವನ್, ರವೀಂದ್ರ ಜಡೇಜಾ ಜತೆಗೆ ಸ್ಟೇಡಿಯಂನಲ್ಲಿದ್ದ ಪುಟ್ಟ ಬಾಲಕನೂ ಕಣ್ಣೀರು ಮಿಡಿದಿದ್ದು ನೋಡಿ ಎಲ್ಲರೂ ಭಾವುಕರಾದರು.
ಅಂತಿಮ ಎಸೆತದವರೆಗೂ ಹೋರಾಟ ನಡೆಸಿದ ಜಡೇಜಾ ಕೊನೆಯ ಓವರ್ ನಲ್ಲಿ ಗೆಲುವಿನ ರನ್ ಹೊಡೆಯಬೇಕೆನ್ನುವಷ್ಟರಲ್ಲಿ ಕ್ಯಾಚ್ ಔಟಾದರು. ಆಗ ಅವರ ಕಣ್ಣಲ್ಲಿದ್ದ ನಿರಾಸೆ ನೋಡಬೇಕಿತ್ತು. ಜತೆಗೆ ಪೆವಿಲಿಯನ್ ನಲ್ಲಿದ್ದ ಶಿಖರ್ ಧವನ್ ಕೂಡಾ ಕಣ್ಣೊರೆಸುತ್ತಿದ್ದುದು ಕಂಡು ಬಂತು. ಯಾಕೆಂದರೆ ಕೊನೆಯ ಥ್ರಿಲ್ಲರ್ ಓವರ್ ಗೆ ಮೊದಲು ಗ್ಲೌಸ್ ಕೊಡುವ ನೆಪದಲ್ಲಿ ಮೈದಾನಕ್ಕೆ ಬಂದಿದ್ದ ಧವನ್, ಜಡೇಜಾಗೆ ಕೊಂಚ ಟಿಪ್ಸ್ ಕೊಟ್ಟು ಹೋಗಿದ್ದರು. ಬಹುಶಃ ಅದು ಕೈಗೂಡದ ನಿರಾಸೆ ಅವರನ್ನು ಹತಾಶರಾಗಿಸಿರಬೇಕು.
49.5 ಓವರ್ ಗಳಲ್ಲಿ ಟೀಂ ಇಂಡಿಯಾ ಅಫ್ಘಾನಿಸ್ತಾನ ಗಳಿಸಿದ್ದ 252 ರನ್ ಗಳಿಸಿ ಆಲೌಟ್ ಆಯಿತು. ವಿಶೇಷವೆಂದರೆ ನಿನ್ನೆ ಅಪರೂಪಕ್ಕೆ ನಾಯಕತ್ವ ವಹಿಸಿದ್ದ ಧೋನಿ ಅತೀ ಹೆಚ್ಚು ಟೈ ಆದ ಪಂದ್ಯಗಳ ನಾಯಕ ಎಂಬ ದಾಖಲೆ ಮಾಡಿದರು. ಬಹುಶಃ ಅವರು ಈ ದಾಖಲೆ ಮಾಡಲಿಕ್ಕೆಂದೇ ನಿನ್ನೆ ನಾಯಕತ್ವ ವಹಿಸಿಕೊಂಡಂತಿತ್ತು. ಅವರು ನಾಯಕತ್ವದಲ್ಲಿ ಭಾರತ ಒಟ್ಟು ಐದು ಪಂದ್ಯಗಳಲ್ಲಿ ಟೈ ಮಾಡಿಕೊಂಡಿದೆ. ಟೀಂ ಇಂಡಿಯಾಕ್ಕೆ ಈ ಫಲಿತಾಂಶದಿಂದ ನಷ್ಟವೇನೂ ಆಗಲಿಲ್ಲ. ಆದರೆ ಅಷ್ಟೊಂದು ಮಹತ್ವವಿಲ್ಲದೇ ಹೋಗಿದ್ದ ಪಂದ್ಯಕ್ಕೆ ಫೈನಲ್ ಪಂದ್ಯದ ಕಳೆ ಬಂದಿದ್ದು ಸುಳ್ಳಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.