ಮುಂಬೈ: ಟೀಂ ಇಂಡಿಯಾದಲ್ಲಿ ಕಳೆದು ಕೆಲವು ಸಮಯದಿಂದಲೂ ಆಯ್ಕೆಗಾರರಿಗೆ ತಲೆನೋವಾಗಿರುವ ನಾಲ್ಕನೇ ಕ್ರಮಾಂಕದ ಬ್ಯಾಟ್ಸ್ ಮನ್ ಯಾರು ಎಂಬ ಪ್ರಶ್ನೆಗೆ ಹಿರಿಯ ಕ್ರಿಕೆಟಿಗ ಸುರೇಶ್ ರೈನಾ ಪರಿಹಾರವೊಂದನ್ನು ಸೂಚಿಸಿದ್ದಾರೆ.
ವಿಶ್ವಕಪ್ ನಲ್ಲೂ ಭಾರತದ ಸೋಲಿಗೆ ಇದೇ ಕ್ರಮಾಂಕಕ್ಕೆ ಉತ್ತಮ ಬ್ಯಾಟ್ಸ್ ಮನ್ ಗಳಿಲ್ಲದೇ ಇರುವುದೇ ಕಾರಣವಾಗಿತ್ತು. ಈಗಲೂ ಆ ಸ್ಥಾನಕ್ಕೆ ಸೂಕ್ತ ಆಟಗಾರನನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಸುರೇಶ್ ರೈನಾ ಆ ಸ್ಥಾನಕ್ಕೆ ನಾನು ಸೂಕ್ತ ಆಟಗಾರನಾಗಬಲ್ಲೆ ಎಂದಿದ್ದಾರೆ.
ಸದ್ಯಕ್ಕೆ ಮೊಣಕಾಲಿನ ಶಸ್ತ್ರಚಿಕಿತ್ಸೆಗೊಳಗಾಗಿ ವಿಶ್ರಾಂತಿಯಲ್ಲಿರುವ ರೈನಾ ಸಂದರ್ಶನವೊಂದರಲ್ಲಿ ‘ಟೀಂ ಇಂಡಿಯಾದ ನಾಲ್ಕನೇ ಕ್ರಮಾಂಕಕ್ಕೆ ನಾನು ಸೂಕ್ತನಾಗಬಲ್ಲೆ. ಹಿಂದೆಯೂ ನಾನು ಈ ಕ್ರಮಾಂಕದಲ್ಲಿ ಆಡಿದ್ದೆ. ಮುಂಬರುವ ಟಿ20 ವಿಶ್ವಕಪ್ ನಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದೇನೆ’ ಎಂದಿದ್ದಾರೆ.