ಮುಂಬೈ: ಐಪಿಎಲ್ ನಲ್ಲಿ ಹೊಸ ಪವರ್ ಪ್ಲೇ ನಿಯಮ ಅಳವಡಿಸಲು ಐಪಿಎಲ್ ಆಡಳಿತ ಮಂಡಳಿ ಸಲ್ಲಿಸಿರುವ ಪ್ರಸ್ತಾವನೆಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.
ಐಪಿಎಲ್ ನಲ್ಲಿ ಕೊನೆಯ ಹಂತದಲ್ಲಿ ವಿಕೆಟ್ ಕಳೆದುಕೊಂಡರೆ ಬೌಲರ್ ನ ಬದಲು ಆಡುವ 11 ರ ಬಳಗದಲ್ಲಿರದ ಬ್ಯಾಟ್ಸ್ ಮನ್ ಒಬ್ಬರಿಗೆ ಆಡುವ ಅವಕಾಶ ನೀಡುವ ಹೊಸ ನಿಯಮವನ್ನು ಜಾರಿಗೊಳಿಸಲು ಐಪಿಎಲ್ ಆಡಳಿತ ಮಂಡಳಿ ಪ್ರಸ್ತಾವನೆ ಸಲ್ಲಿಸಿತ್ತು.
ಈ ನಿಯಮವನ್ನು ದೇಶೀಯ ಟೂರ್ನಿ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಅಳವಡಿಸಲು ಉದ್ದೇಶಿಸಲಾಗಿದೆ. ಇದಕ್ಕೀಗ ಗಂಗೂಲಿ ಕೂಡಾ ಹಸಿರು ನಿಶಾನೆ ತೋರಿದ್ದಾರೆ. ಇದು ಒಂದು ರೀತಿಯಲ್ಲಿ ಹಿಂದೆ ಜಾರಿಯಲ್ಲಿದ್ದ ಸೂಪರ್ ಸಬ್ ಆಟಗಾರನ ನಿಯಮಾಳಿಯಂತೆಯೇ ಇದೆ. ಆ ನಿಯಮವನ್ನು ಬಳಿಕ ಐಸಿಸಿ ಹಿಂಪಡೆದಿತ್ತು. ಇದೀಗ ಐಪಿಎಲ್ ನಲ್ಲೇ ಅಂತಹದ್ದೇ ನಿಯಮವೊಂದು ಜಾರಿಗೆ ತರಲು ಉದ್ದೇಶಿಸಿದ್ದು, ಅದು ಎಷ್ಟರ ಮಟ್ಟಿಗೆ ಯಶಸ್ಸು ಗಳಿಸುತ್ತದೆ ಎಂದು ಕಾದು ನೋಡಬೇಕು.