ಮುಂಬೈ: ಟೀಂ ಇಂಡಿಯಾ ಆಲ್ ರೌಂಡರ್, ಸೌರಾಷ್ಟ್ರ ಮೂಲದ ರವೀಂದ್ರ ಜಡೇಜಾಗೆ ರಣಜಿ ಟ್ರೋಫಿ ಫೈನಲ್ ಆಡಲು ಬಿಸಿಸಿಐ ಅಧ‍್ಯಕ್ಷ ಸೌರವ್ ಗಂಗೂಲಿ ಅವಕಾಶ ನಿರಾಕರಿಸಿದ್ದಾರೆ.
ಮಾರ್ಚ್ 12 ರಿಂದ ದ.ಆಫ್ರಿಕಾ ವಿರುದ್ಧ ಭಾರತ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಈ ಟೂರ್ನಿಯಲ್ಲಿ ಆಡಲು ಜಡೇಜಾ ಟೀಂ ಇಂಡಿಯಾಗೆ ಲಭ್ಯರಿರಬೇಕು. ಅದರ ಬದಲು ರಣಜಿ ಆಡಲು ರಾಷ್ಟ್ರೀಯ ತಂಡದ ಕರ್ತವ್ಯವನ್ನು ಮರೆಯಬಾರದು ಎಂದು ಗಂಗೂಲಿ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಮಾಡಿರುವ ಮನವಿ ತಿರಸ್ಕರಿಸಿದ್ದಾರೆ.
ಆದರೆ ಇದು ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಅಧ‍್ಯಕ್ಷ ಜಯ್ ಶಾ ಅಸಮಾಧಾನಕ್ಕೆ ಕಾರಣವಾಗಿದೆ. ರಣಜಿಯಂತಹ ದೇಶೀಯ ಕ್ರೀಡಾ ಕೂಟವನ್ನು ಜನಪ್ರಿಯಗೊಳಿಸಬೇಕಾದರೆ ಸ್ಟಾರ್ ಆಟಗಾರರು ಪಾಲ್ಗೊಳ್ಳಬೇಕು. ರಾಷ್ಟ್ರೀಯ ತಂಡವೇ ಪ್ರಥಮ ಆದ್ಯತೆ ಎಂದಾದರೆ ಐಪಿಎಲ್ ಸಂದರ್ಭದಲ್ಲಿ ಯಾಕೆ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸುವುದಿಲ್ಲ? ಯಾಕೆಂದರೆ ಅದರಿಂದ ಹಣ ಬರುತ್ತದೆ. ಆದರೆ ರಣಜಿಯಲ್ಲಿ ಹಾಗಿಲ್ಲ. ಅದಕ್ಕೇ ಈ ನಿಯಮ’ ಎಂದು ಜಯ್ ಶಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.