ಹೈದರಾಬಾದ್: ಸಂಜು ಸ್ಯಾಮ್ಸನ್ ಅವರ ಶತಕ, ನಾಯಕ ಸೂರ್ಯಕುಮಾರ್ ಯಾದವ್ ಅರ್ಧಶತಕದ ಬಲದಿಂದ ಭಾರತ ತಂಡವು ಶನಿವಾರ ಬಾಂಗ್ಲಾದೇಶ ವಿರುದ್ಧ ನಡೆದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯವನ್ನು 133 ರನ್ಗಳಿಂದ ಗೆಲುವು ಸಾಧಿಸಿತು.
ಭಾರತ ಬ್ಯಾಟರ್ಗಳ ಸಿಡಿಲಬ್ಬರದ ಬ್ಯಾಟಿಂಗ್ನಿಂದ ನೆರವಿನಿಂದ ಭಾರತ ತಂಡ ಟಿ20 ಕ್ರಿಕೆಟ್ ಇತಿಹಾಸದಲ್ಲಿ ತನ್ನ ಅತ್ಯಧಿಕ ಮೊತ್ತ ದಾಖಲಿಸಿತು. ಭಾರತ 20 ಓವರುಗಳಲ್ಲಿ 6 ವಿಕೆಟ್ಗೆ 297 ರನ್ಗಳ ಭಾರಿ ಮೊತ್ತ ಗಳಿಸಿತು.
ಭಾರತದ ಆಕ್ರಮಣದ ಆಟದೆದುರು ಕಂಗಾಲಾದ ಬಾಂಗ್ಲಾದೇಶ 20 ಓವರುಗಳಲ್ಲಿ 7 ವಿಕೆಟ್ಗೆ 164 ರನ್ ಗಳಿಸಿ ಸವಾಲು ಮುಗಿಸಿತು. ಈ ಮೂಲಕ ಭಾರತ ತಂಡವು ಬಾಂಗ್ಲಾ ವಿರುದ್ಧದ ಸರಣಿಯನ್ನು 3-0ಯಿಂದ ಗೆದ್ದುಕೊಂಡಿತು.
ಇದು ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ದಾಖಲಾದ ಎರಡನೇ ಅತ್ಯಧಿಕ ಮೊತ್ತ (297/6). ನೇಪಾಳ, ಕಳೆದ ವರ್ಷ ಏಷ್ಯನ್ ಗೇಮ್ಸ್ನಲ್ಲಿ ಮಂಗೋಲಿಯಾ ವಿರುದ್ಧ 3 ವಿಕೆಟ್ಗೆ 314 ರನ್ ಗಳಿಸಿದ್ದು ದಾಖಲೆಯಾಗಿದೆ. ಭಾರತದ ಇನಿಂಗ್ಸ್ನಲ್ಲಿ ದಾಖಲೆಯ 22 ಸಿಕ್ಸರ್, 25 ಬೌಂಡರಿಗಳು ಹರಿದು ಬಂದವು. 7.2 ಓವರ್ ಆಗಿದ್ದಾಗ 100, 14 ಓವರ್ಗಳಲ್ಲಿ 200 ರನ್ ಗಡಿ ದಾಟಿತು.
ಭಾರತದ ಈ ಹಿಂದಿನ ಗರಿಷ್ಠ ಮೊತ್ತ 5 ವಿಕೆಟ್ಗೆ 260 ರನ್ಗಳಾಗಿತ್ತು. ಇದನ್ನು ಶ್ರೀಲಂಕಾ ವಿರುದ್ಧ 2017ರಲ್ಲಿ ಇಂದೋರ್ನಲ್ಲಿ ಗಳಿಸಿತ್ತು. ಅದನ್ನು ಮುರಿಯಿತು.
ಸಂಜು ಸ್ಯಾಮ್ಸನ್ 47 ಎಸೆತಗಳಲ್ಲಿ 111 ರನ್ ಸಿಡಿಸಿದರು. ಇದು ಟಿ20 ಕ್ರಿಕೆಟ್ನಲ್ಲಿ ಭಾರತದ ಪರ ಎರಡನೇ ಅತಿ ವೇಗದ ಶತಕ. ವೇಗದ ಶತಕದ ದಾಖಲೆ ರೋಹಿತ್ ಶರ್ಮಾ (35 ಎಸೆತ) ಹೆಸರಿನಲ್ಲಿದೆ. ಸೂರ್ಯಕುಮಾರ್ ಕೇವಲ 23 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದರು. ಅವರು 75 ರನ್ ಸಿಡಿಸಿದರು.