ಮುಂಬೈ: ಈ ವರ್ಷಾಂತ್ಯಕ್ಕೆ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಒಂದು ಪಂದ್ಯವನ್ನು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಈ ಕಾರಣಕ್ಕೆ ಮಿಸ್ ಮಾಡಿಕೊಳ್ಳುವ ಸಾಧ್ಯತೆಯಿದೆ.
ಆಸ್ಟ್ರೇಲಿಯಾದಲ್ಲಿ ಈ ಬಾರಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ನಡೆಯಲಿದೆ. ಟೀಂ ಇಂಡಿಯಾ ಪಾಲಿಗೆ ಇದು ಮಹತ್ವದ ಮತ್ತು ಪ್ರತಿಷ್ಠಿತ ಟೂರ್ನಿಯಾಗಿದೆ. ಅತ್ತ ಆಸ್ಟ್ರೇಲಿಯಾ 2014-15 ರಿಂದೀಚೆಗೆ ಒಮ್ಮೆಯೂ ಈ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. ಈ ಬಾರಿಯೂ ಭಾರತ ಮೇಲುಗೈ ಸಾಧಿಸುವ ವಿಶ್ವಾಸದಲ್ಲಿದೆ.
ಆದರೆ ಆರಂಭದ ಒಂದು ಟೆಸ್ಟ್ ಪಂದ್ಯಕ್ಕೆ ರೋಹಿತ್ ಅಲಭ್ಯರಾಗುವ ಸಾಧ್ಯತೆಯಿದೆ ಎಂದು ಬಿಸಿಸಿಐ ಮೂಲಗಳು ಹೇಳಿವೆ. ವೈಯಕ್ತಿಕ ಕಾರಣಗಳಿಂದ ರೋಹಿತ್ ಒಂದು ಟೆಸ್ಟ್ ನಿಂದ ಹೊರಗುಳಿಯುವ ಅನಿವಾರ್ಯತೆ ಎದುರಾಗಬಹುದು ಎನ್ನಲಾಗಿದೆ. ಆದರೆ ಈ ಪಂದ್ಯಕ್ಕೆ ಮೊದಲು ಅವರ ವೈಯಕ್ತಿಕ ಸಮಸ್ಯೆ ಸರಿ ಹೋದರೆ ಅವರು ಸಂಪೂರ್ಣವಾಗಿ ಸರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಒಂದು ವೇಳೆ ರೋಹಿತ್ ಶರ್ಮಾ ಸರಣಿಯಿಂದ ಹೊರಗುಳಿದರೆ ಅಭಿಮನ್ಯು ಈಶ್ವರನ್ ತಂಡಕ್ಕೆ ಆಯ್ಕೆಯಾಗಬಹುದು. ಆದರೆ ಸದ್ಯಕ್ಕೆ ಯಾವುದೂ ಅಂತಿಮವಾಗಿಲ್ಲ. ಭಾರತಕ್ಕೆ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ದೃಷ್ಟಿಯಿಂದ ಈ ಸರಣಿಯಲ್ಲಿ ಗೆಲುವು ಕಾಣುವುದು ಮುಖ್ಯವಾಗಿದೆ.