ವಿಶಾಖಪಟ್ಟಣ: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ನ ನಾಲ್ಕನೇ ದಿನ ಭಾರತ ದ್ವಿತೀಯ ಇನಿಂಗ್ಸ್ ನಲ್ಲಿ 4 ವಿಕೆಟ್ ನಷ್ಟಕ್ಕೆ 323 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ.
ಮೊದಲ ಇನಿಂಗ್ಸ್ ನಲ್ಲಿ 71 ರನ್ ಗಳ ಮುನ್ನಡೆ ಪಡೆದಿದ್ದ ಭಾರತ ಇದೀಗ ಎದುರಾಳಿಗಳಿಗೆ 395 ರನ್ ಗಳ ಗೆಲುವಿನ ಗುರಿ ನೀಡಿದೆ. ಆದರೆ ನಾಳೆ ಒಂದೇ ದಿನ ಪಂದ್ಯ ಬಾಕಿಯಿರುವುದರಿಂದ ಪಂದ್ಯ ಕುತೂಹಲದ ಘಟ್ಟ ತಲುಪಿದೆ.
ಆರಂಭಿಕರಾಗಿ ಮೊದಲ ಟೆಸ್ಟ್ ಪಂದ್ಯವಾಡುತ್ತಿರುವ ರೋಹಿತ್ ಶರ್ಮಾ ದ್ವಿತೀಯ ಇನಿಂಗ್ಸ್ ನಲ್ಲೂ ಶತಕ (127) ಗಳಿಸಿ ದಾಖಲೆ ಮಾಡಿದ್ದಾರೆ. ಚುರುಕಾಗಿ ರನ್ ಗಳಿಸುವುದರತ್ತ ಹೆಚ್ಚು ಗಮನ ಕೊಟ್ಟ ಟೀಂ ಇಂಡಿಯಾ ಪರ ಚೇತೇಶ್ವರ ಪೂಜಾರ 81 ಮತ್ತು ರವೀಂದ್ರ ಜಡೇಜಾ 40 ರನ್ ಗಳಿಸಿ ಔಟಾದರು. ಅಂತಿಮವಾಗಿ ನಾಯಕ ಕೊಹ್ಲಿ ಅಜೇಯ 31 ಮತ್ತು ಅಜಿಂಕ್ಯಾ ರೆಹಾನೆ 27 ರನ್ ಗಳಿಸಿದರು.