ಮುಂದಿನ ಆರುತಿಂಗಳಲ್ಲಿ ಲೋಧಾ ಸಮಿತಿ ಸುಧಾರಣೆಗಳನ್ನು ಅನುಷ್ಠಾನಕ್ಕೆ ತರುವುದಕ್ಕೆ ಸಂಬಂಧಿಸಿದ ನಿಗದಿತ ಸಭೆಯನ್ನು ಮುಂದೂಡಬೇಕೆಂಬ ಬಿಸಿಸಿಐ ಮನವಿಯನ್ನು ಸುಪ್ರೀಂಕೋರ್ಟ್ ನೇಮಿಸಿದ ನ್ಯಾ. ಆರ್.ಎಂ. ಲೋಧಾ ಸಮಿತಿಯು ತಿರಸ್ಕರಿಸಿದೆ.
ಬಿಸಿಸಿಐಗೆ ನೂತನವಾಗಿ ನೇಮಕವಾದ ಕಾನೂನು ಸಲಹೆಗಾರ ನ್ಯಾ. ಮಾರ್ಕಂಡೇಯ ಕಾಟ್ಜು ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಪುನರ್ಪರಿಶೀಲನೆ ಅರ್ಜಿ ಸಲ್ಲಿಸುವಂತೆಯೂ ಹಾಗೂ ಸಮಿತಿಯನ್ನು ಭೇಟಿ ಮಾಡದಂತೆಯೂ ಬಿಸಿಸಿಐಗೆ ತಿಳಿಸಿದ್ದಾರೆ. ಲೋಧಾ ಸಮಿತಿ ಶಿಫಾರಸು ಮಾಡಿದ ಸುಧಾರಣೆಗಳು ಕಾನೂನುಬಾಹಿರ ಎಂದೂ ಅವರು ಪರಿಗಣಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಅಜಯ್ ಶಿರ್ಕೆ ಅಂತಿಮವಾಗಿ ಸಮಿತಿಗೆ ಪತ್ರ ಬರೆದು ತಮ್ಮ ಜತೆ ಮತ್ತು ಅನುರಾಗ್ ಠಾಕೂರ್ ಜತೆ ಸಭೆಯನ್ನು ಮುಂದೂಡಬೇಕೆಂದು ಮನವಿ ಮಾಡಿದ್ದು ಈ ಮನವಿಯನ್ನು ತಿರಸ್ಕರಿಸಲಾಗಿದೆ ಎಂದು ಸಮಿತಿಗೆ ಸಮೀಪವರ್ತಿ ಮೂಲಗಳು ಹೇಳಿವೆ.
ನಾಳೆ ಬೆಳಿಗ್ಗೆ 11 ಗಂಟೆಗೆ ಸಮಿತಿಯನ್ನು ಭೇಟಿ ಮಾಡದಿದ್ದಲ್ಲಿ ಠಾಕುರ್ ಮತ್ತು ಶಿರ್ಕೆ ನ್ಯಾಯಾಲಯ ನಿಂದನೆಯನ್ನು ಎದುರಿಸಬೇಕಾಗುತ್ತದೆಂದು ತಿಳಿದುಬಂದಿದೆ. ಜುಲೈ 18ರಂದು ಸುಪ್ರೀಂಕೋರ್ಟ್ ನೀಡಿದ ತೀರ್ಪಿಗೆ ತಡೆ ಆಜ್ಞೆ ತರುವ ಗುರಿಯೊಂದಿಗೆ ಬಿಸಿಸಿಐ ಈ ವಿಳಂಬ ತಂತ್ರಗಳನ್ನು ಉದ್ದೇಶಪೂರ್ವಕವಾಗಿ ಅನುಸರಿಸುತ್ತಿದೆ ಎಂದು ಸಮಿತಿಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.